ಸ್ವಚ್ಛತಾ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ

19chn1
Published on

ಚಾಮರಾಜನಗರ: ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮುಂಜಾನೆಯೇ ಭೇಟಿ ನೀಡಿ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು.

ನಗರದ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿನ ವ್ಯಾಪಾರಿಗಳ ಕುಂದುಕೊರತೆ ಮತ್ತು ಸಮಸ್ಯೆಗಳನ್ನು ಆಲಿಸಿದರು. ಮಾರುಕಟ್ಟೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುತ್ತಮುತ್ತಲಿನ ಬೀದಿಗಳಲ್ಲಿ ಸಂಚರಿಸಿ ನೈರ್ಮಲ್ಯ ಹಾಗೂ ಇನ್ನಿತರೆ ಕಾರ್ಯಗಳನ್ನು ವೀಕ್ಷಣೆ ಮಾಡಿದರು. ನಗರಸಭೆ ಪೌರಕಾರ್ಮಿಕರೊಂದಿಗೆ ಮಾತನಾಡಿ, ಅವರ ಕುಂದು ಕೊರತೆಗಳನ್ನು ಆಲಿಸಿದರು.

ಬಳಿಕ ಮಾರುಕಟ್ಟೆಯ ಎದುರಿಗೆ ಇರುವ ಹಳೆ ಪೊಲೀಸ್ ಸ್ಟೇಷನ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಮಹದೇಶ್ವರ ಬಡಾವಣೆಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಬಡಾವಣೆ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯ ಬಗ್ಗೆ ಚರ್ಚಿಸಿದರು. ಕೂಡಲೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್, ಪರಿಸರ ಅಭಿಯಂತರರಾದ ಗಿರಿಜಾ, ಹಿರಿಯ ಆರೋಗ್ಯ ನಿರೀಕ್ಷಕರಾದ ಸುಷ್ಮಾ, ಪುಷ್ಪ, ಮಂಜು, ಕಂದಾಯ ಅಧಿಕಾರಿ ಶರವಣ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net