ಸಚಿವರ ಸಭೆಯನ್ನು ಧಿಕ್ಕರಿಸಿದ ಅನ್ನದಾತರು

17chn8
Published on

ಚಾಮರಾಜನಗರ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ಕರೆಂಟ್ ಪೂರೈಕೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ರೈತರ ಆಕ್ರೋಶ ವಿದ್ಯುತ್ ಸಂಚಲನ ಮೂಡಿಸಿದಂತಿತ್ತು.

ನಿರಂತರ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ರೈತ ಸಂಘದ ಮುಖಂಡರು ಧರಣಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರೊಂದಿಗೆ ಸಂಧಾನ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಕರೆದರು.
ಸಭಾಂಗಣಕ್ಕೆ ಆಗಮಿಸಿದ ರೈತರಿಗೆ ಜಾಗ ಸಾಕಾಗಲಿಲ್ಲ. ಇಲ್ಲಿ ಸಭೆ ಕರೆಯುವ ಬದಲು ಹಳೇ ಕೆಡಿಪಿ ಸಭಾಂಗಣದಲ್ಲಿ ಸಭೆ ಮಾಡಬಹುದಿತ್ತು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ಎದುರೇ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತ ಹೊರ ನಡೆದರು. ಜಿಲ್ಲಾಡಳಿತ ಭವನದ ಒಳಗೆ ರೈತರ ೋಷಣೆ ಪ್ರತಿಧ್ವನಿಸಿತು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಕೂಗಬೇಡಿ ಎಂದು ಹೇಳಿದ ಬಳಿಕ ರೈತರು ಸುಮ್ಮನೆ ನಡೆದು ಕೆಡಿಪಿ ಸಭಾಂಗಣಕ್ಕೆ ಬಂದರು. ಆದರೆ ಅಲ್ಲೂ ಜಾಗದ ಅಭಾವವಿದ್ದ ಕಾರಣ ಅಂತಿಮವಾಗಿ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ವಲ್ಪ ಹೊತ್ತು ಬ್ರೇಕ್ ಹಾಕಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್‌ಪ್ರಸಾದ್, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಪಂ ಸಿಇಒ ಆನಂದ್‌ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಮತ್ತು ಇತರರು ರೈತರ ಅಹವಾಲು ಆಲಿಸಿದರು.

ನಾವೆಲ್ಲ ಒಂದೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಿದ್ದಾಗ ರೈತರು ಮನವಿ ಸಲ್ಲಿಸಿದ್ದೆವು. ಆ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ ರೈತ ಮುಖಂಡರಿಗೆ ನಿಮ್ಮಲ್ಲೇ ಬಣಗಳಿವೆ. ಎಲ್ಲರೂ ಒಂದಾಗಿ ಬನ್ನಿ ಎಂದು ಹೇಳಿದ್ದರು. ರೈತರ ವಿಚಾರ ಬಂದಾಗ ನಮ್ಮಲ್ಲಿ ಬಣಗಳಿಲ್ಲ. ನಾವೆಲ್ಲರೂ ಒಂದೇ ಎನ್ನುವುದು ಶಾಸಕರಿಗೆ ಗೊತ್ತಿಲ್ಲ. ಈಗ ನಾವೆಲ್ಲ ಒಟ್ಟಾಗಿ ಬಂದಿದ್ದೇವೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ರೈತರಿಗೆ 10 ಗಂಟೆ ವಿದ್ಯುತ್ ಕೊಡಿಸಲಿ ಎಂದು ರೈತ ಮುಖಂಡ ಹೊನ್ನೂರು ಬಸವಣ್ಣ ಒತ್ತಾಯಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ಬೆಳೆ ನಷ್ಟ ಉಂಟಾಗಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಶಾಸಕರು, ಮಂತ್ರಿಗಳು, ಸರ್ಕಾರಿ ನೌಕರರಿಗೆ ಸಂಬಳ ಜಾಸ್ತಿ ಆಗುತ್ತದೆ. ಆದರೆ ರೈತರಿಗೆ ಮಾತ್ರ ಆದಾಯ ಕಡಿಮೆ. ಬೇರೆ ರಾಜ್ಯಗಳ ಮಾದರಿಯಲ್ಲಿ 10 ಗಂಟೆ ವಿದ್ಯುತ್ ನೀಡಿ ಎಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಹೇಶ್‌ಪ್ರಭು ಮಾತನಾಡಿ, ರಾಜ್ಯ ಸರ್ಕಾರ 5 ಗಂಟೆ ವಿದ್ಯುತ್ ನೀಡುವುದಾಗಿ ಹೇಳಿರುವುದನ್ನು ಮರು ಪರಿಶೀಲಿಸಿ ಕನಿಷ್ಠ 7 ಗಂಟೆ ಕೊಡಬೇಕು. ಹಗಲು ವೇಳೆಯೇ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಆಹಾರ ಉತ್ಪಾದನೆ ಕುಂಠಿತವಾಗುತ್ತದೆ. ವಿದ್ಯುತ್ ಕರ ನಿರಾಕರಣೆ ಚಳವಳಿಯ ಹಕ್ಕೊತ್ತಾಯದಂತೆ ನಮ್ಮ ಬೇಡಿಕೆ ಈಡೇರಿಸಬೇಕು. ಕಬ್ಬು ಬಾಕಿ ಹಣ, ಸೂರ್ಯಕಾಂತಿ, ಅರಿಶಿಣ ಖರೀದಿ ಕೇಂದ್ರ ಸಕಾಲಕ್ಕೆ ತೆರೆಯಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯಿಸಿ, ಬರದ ಪರಿಸ್ಥಿತಿಯಲ್ಲಿ ಬೆಳೆ ಉಳಿಸಿಕೊಳ್ಳಲು ಸಾಧ್ಯವಾದಷ್ಟು ಕ್ರಮ ವಹಿಸುತ್ತಿದ್ದೇವೆ. ಸರ್ಕಾರಕ್ಕೆ ಕೃಷಿ ಪಂಪ್‌ಸೆಟ್‌ಗಳಿಗೆ 10 ಗಂಟೆ ವಿದ್ಯುತ್ ನೀಡಬೇಕೆಂಬ ಮನಸ್ಸು ಇದೆ. ಆದರೆ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ 5 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಪಂಜಾಬ್, ಉತ್ತರಪ್ರದೇಶದಿಂದ ವಿದ್ಯುತ್ ಖರೀದಿ ಮಾಡಲಾಗಿದ್ದು, ಸದ್ಯದ ಪರಿಸ್ಥಿತಿಗೆ ಬೆಳೆ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಮಾಧ್ಯಮಗಳನ್ನು ಹೊರಗಿಡುವ ಪ್ರಯತ್ನ:
ರೈತರೊಂದಿಗೆ ಸಚಿವ ಕೆ.ವೆಂಕಟೇಶ್ ನಡೆಸಿದ ಸಭೆಗೆ ಮಾಧ್ಯಮಗಳನ್ನು ಹೊರಗಿಡುವ ಪ್ರಯತ್ನಗಳನ್ನು ಜಿಲ್ಲಾಡಳಿತ ಮಾಡಿತು. ಡಿಸಿ ಕಚೇರಿ ಸಭಾಂಗಣದಲ್ಲಿ ಸ್ಥಳಾವಕಾಶದ ಕೊರತೆಯ ಕಾರಣವೊಡ್ಡಿ ಮಾಧ್ಯಮದವರನ್ನು ಹೊರಗೆ ಹೋಗಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದರು. ಸಭೆ ಜೆ.ಎಚ್.ಪಟೇಲ್ ಸಭಾಂಗಣಕ್ಕೆ ಸ್ಥಳಾಂತರಗೊಂಡ ಬಳಿಕ ಎಡಿಸಿ ಗೀತಾ ಹುಡೇದಾ ಮಾಧ್ಯಮದವರನ್ನು ಹೊರಗೆ ಕಳುಹಿಸಲು ಮುಂದಾದರು. ಈ ವೇಳೆ ರೈತ ಮುಖಂಡರು ಮಾಧ್ಯಮದವರನ್ನು ಸಭೆಗೆ ಕರೆಯಿರಿ. ಇಲ್ಲಿರುವವರನ್ನು ಹೊರಗೆ ಕಳುಹಿಸಬಾರದು. ರೈತರ ವಿಚಾರ ಜನರಿಗೆ ತಿಳಿಯುವುದು ಬೇಡವೇ ಎಂದು ಹೇಳಿದ ಮೇಲೆ ಅಧಿಕಾರಿಗಳು ಚಕಾರವೆತ್ತಲಿಲ್ಲ. ಜಿಲ್ಲಾಡಳಿತದ ನಡೆಯನ್ನು ಖಂಡಿಸಿ ಕೆಲವು ಪತ್ರಕರ್ತರು ಸಭೆಯನ್ನು ಬಹಿಷ್ಕರಿಸಿದರು.

ವಿದ್ಯುತ್ ಕರ ನಿರಾಕರಣೆ ಸಂಬಂಧ ಮುಂದಿನ ದಿನಗಳಲ್ಲಿ ರೈತ ಮುಖಂಡರೊಂದಿಗೆ ಚರ್ಚೆ ನಡೆಸಲಾಗುವುದು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತೀರ್ಮಾನ ಕೈಗೊಳ್ಳೋಣ.ಕೆ.ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net