

ಚಾಮರಾಜನಗರ: ಅಪಾರ ಭಕ್ತರ ಜಯೋಷ, ಅದ್ದೂರಿ ಮೆರವಣಿ, ಕಲಾ ತಂಡಗಳ ಮೆರುಗು, ಕೇಸರಿ ಧ್ವಜಗಳ ಹಾರಾಟ, ಹೆಜ್ಜೆ ಹೆಜ್ಜೆಗೂ ಪೂಜೆ ಮಾಡಿ ನಗರದಲ್ಲಿ ಸುದರ್ಶನ ಗಣೇಶ ಮೂರ್ತಿಯನ್ನು ವಿಜೃಂಭಣೆಯಿಂದ ಸೋಮವಾರ ವಿಸರ್ಜಿಸಲಾಯಿತು.
ನಗರದ ರಥ ಬೀದಿಯಲ್ಲಿ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ 61ನೇ ವರ್ಷದ ಸುದರ್ಶನ ಗೌರಿ-ಗಣಪತಿಮೂರ್ತಿಯನ್ನು ಬೃಹತ್ ಶೋಭಾಯಾತ್ರೆಯೊಂದಿಗೆ ವಿಸರ್ಜಿಸಲಾಯಿತು. ಬೆಳಗ್ಗೆ ಅಭಿಜಿತ್ ಮುಹೂರ್ತದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ರಥದ ಬೀದಿ, ಖಡಕ್‌ಪುರ ಮೊಹಲ್ಲಾ, ಅಂಬೇಡ್ಕರ್ ಬೀದಿ, ಡಿವಿಯೇಷನ್ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಜಾನಪದ ಕಲಾತಂಡಗಳು ಸಾಥ್ ನೀಡಿದವು. ಹುಲಿ ವೇಷದ ಕುಣಿತ, ಬ್ಯಾಂಡ್‌ಸೆಟ್, ಮಹಿಳಾ ವೀರಗಾಸೆ, ಮಂಗಳವಾದ್ಯ, ಡೊಳ್ಳು ಕುಣಿತ, ನಗಾರಿ ತಮಟೆ ಮತ್ತು ಇತರ ಕಲಾತಂಡಗಳು ಮೆರವಣಿಗೆಗೆ ರಂಗು ತುಂಬಿದವು. ಭಕ್ತರ ಜಯೋಷಗಳ ನಡುವೆ ಗಣೇಶ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ಸಾಗಿತು. ಮನೆ ಮನೆಗಳಿಂದ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.
ಬಿಗಿಬಂದೋಬಸ್ತ್: ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ನೇತೃತ್ವದಲ್ಲಿ ಡಿವೈಎಸ್ಪಿ, ಇನ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್, ಕೆಎಸ್‌ಆರ್‌ಪಿ ತುಕಡಿ, ಹೋಂಗಾರ್ಡ್‌ಗಳು ಕರ್ತವ್ಯ ನಿರ್ವಹಿಸಿದರು.
ಗಣೇಶ ಮೂರ್ತಿ ವಿಸರ್ಜನಾ ಮಹೋತ್ಸವದಲ್ಲಿ ಸಾಮಾನ್ಯ ಭಕ್ತರೊಂದಿಗೆ ರಾಜಕಾರಣಿಗಳ ದಂಡು ಕಾಣಿಸಿಕೊಂಡಿತು. ನಗರಸಭೆ ಸದಸ್ಯರು, ಹಿಂದು ಪರ ಸಂಘಟನೆಗಳ ಮುಖಂಡರು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರೂ ಭಾಗವಹಿಸಿದರು.
ದೊಡ್ಡರಸನ ಕೊಳದಲ್ಲಿ ವಿಸರ್ಜನೆ: ನಗರದ ದೊಡ್ಡರಸನ ಕೊಳದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ ಪ್ರಾರಂಭವಾದ ಮೆರವಣಿಗೆ ರಾತ್ರಿಯಾದರೂ ಮುಗಿದಿರಲಿಲ್ಲ. ಅಪಾರ ಭಕ್ತರ ಸಮ್ಮುಖದಲ್ಲಿ ದೊಡ್ಡರಸನ ಕೊಳದ ಬಳಿಗೆ ಗಣೇಶ ಮೂರ್ತಿಯನ್ನು ತಂದು ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಯಿತು.
61ನೇ ವರ್ಷದ ಸುದರ್ಶನ ಗಣೇಶ ಮೂರ್ತಿಯನ್ನು ಪ್ರತಿ ವರ್ಷದಂತೆ ಈ ಸಲವೂ ಧರ್ಮ ರಕ್ಷಣೆಗಾಗಿ ಪ್ರತಿಷ್ಠಾಪನೆ ಮಾಡಿದ್ದೆವು. ಅದ್ದೂರಿಯಾಗಿ ವಿಸರ್ಜನಾ ಮಹೋತ್ಸವವನ್ನು ನೆರವೇರಿಸಿದ್ದೇವೆ. ಮುಂದಿನ ವರ್ಷ ಮತ್ತಷ್ಟು ವಿಜೃಂಭಣೆಯಿಂದ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಮಾಡುತ್ತೇವೆ.ಶಿವು ವಿರಾಟ್, ಪ್ರಧಾನ ಕಾರ್ಯದರ್ಶಿ, ವಿದ್ಯಾಗಣಪತಿ ಮಂಡಳಿ, ಚಾಮರಾಜನಗರ