

ಚಾಮರಾಜನಗರ : ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ವೈರುಧ್ಯಗಳಿಗೆ ಬುದ್ಧನ ಚಿಂತನೆಗಳ ಅಗತ್ಯತೆ ತುರ್ತಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಸಾಹಿತಿ ಮಂಜು ಕೋಡಿ ಉಗನೆ ಅಭಿಪ್ರಾಯಪಟ್ಟರು.
ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬೌದ್ಧ ವಿಹಾರದಲ್ಲಿ ರಂಗವಾಹಿನಿ, ದಲಿತ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ನೆನಪಿನಾರ್ಥ ಶುಕ್ರವಾರ ಆಯೋಜಿಸಿದ್ದ ಬುದ್ಧ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟವಾದ ಕವಿಗೋಷ್ಠಿ ಆಯೋಜಿಸಿರುವುದು ಖುಷಿಯ ಸಂಗತಿ. ಈ ನೆಲದಲ್ಲಿ ಧಾರ್ಮಿಕ ಹಿನ್ನೆಲೆಯಲ್ಲೇ ಸಾಕಷ್ಟು ಸಾಹಿತ್ಯ ರಚನೆಗೊಂಡಿದೆ. ಆದರೆ, ಬೌದ್ಧ ಧರ್ಮದ ತಳಹದಿಯಲ್ಲಿ ಸಾಹಿತ್ಯ ರಚನೆಯಾಗಿರುವುದು ವಿರಳವಾಗಿದೆ. ಡಾ.ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ ನಂತರ ಸಾಕಷ್ಟು ವಿಚಾರಗಳು ಸಾಹಿತ್ಯದೊಳಗೆ ಚರ್ಚೆಗೆ ಒಳಪಟ್ಟವು ಎಂದು ತಿಳಿಸಿದರು.
ಬೌದ್ಧ ಧರ್ಮದ ಚಿಂತನೆಗಳನ್ನು ಒಳಗೊಂಡಿರುವ ಸಾಹಿತ್ಯಕ್ಕೆ ಚಿಕಿತ್ಸಕ ಗುಣವಿದೆ. ಪ್ರಸ್ತುತ ಜಗತ್ತಿನಲ್ಲಿ ಜರುಗುತ್ತಿರುವ ಅಮಾನವೀಯ ನಡೆ, ಯುದ್ಧದ ಭೀತಿಗೆ ಬುದ್ಧ ಚಿಂತನೆಗಳು ಅಗತ್ಯವಿದೆ. ಯುದ್ಧಕ್ಕಿಂತಲೂ ನಮಗೆ ಬುದ್ಧ ಮುಖ್ಯ ಎಂಬುದನ್ನು ಮನಗಾಣಬೇಕಿದೆ. ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ಬೌದ್ಧ ಧರ್ಮದ ಪ್ರಭಾವ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಎಸ್.ಶಿವಸ್ವಾಮಿ ಮಾತನಾಡಿ, ಇದೊಂದು ಚಾರಿತ್ರಿಕ ಕವಿಗೋಷ್ಠಿಯಾಗಿದ್ದು, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂತಹ ಬೌದ್ಧ ಚಿಂತನೆಗಳು ಮಾದರಿಯಾಗಿವೆ. ಬಹಳ ಸಂವೇದನಾಶೀಲ ಸಾಲುಗಳು ಕವಿತೆಗಳಲ್ಲಿ ಮೂಡಿಬಂದಿದೆ. ಕನ್ನಡ ಸಾಹಿತ್ಯ ಪರಂಪರೆಗೆ ಬೌದ್ಧ ಧರ್ಮ ಗಾಢವಾದ ಪ್ರಭಾವ ಬೀರಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಅದನ್ನು ಮುನ್ನಡೆಸಬೇಕಿದೆ ಎಂದರು.ರಂಗವಾಹಿನಿ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಗುರುರಾಜ್ ಬಿ.ಯರಗನಹಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಸಹಕಾರ್ಯದರ್ಶಿ ಶಾಂತರಾಜು, ತಾಲೂಕು ಅಧ್ಯಕ್ಷ ರಾಮಸ್ವಾಮಿ ಇತರರು ಹಾಜರಿದ್ದರು.
ಕವಿತೆ ವಾಚನ: ಕವಿಗೋಷ್ಠಿಯಲ್ಲಿ ಕೆಸ್ತೂರು ಮಂಜುನಾಥ್, ಕೆಂಪನಪುರ ಶಿವಕುಮಾರ್, ಕಾಳಿಂಹಸ್ವಾಮಿ ಸಿದ್ಧಾರ್ಥ, ಯೋಗೇಶ್ ಚಿಕ್ಕತುಪ್ಪೂರು, ಪುಷ್ಪಾ ಬೆಂಡರವಾಡಿ, ಕಮರವಾಡಿ ಮಹದೇಸ್ವಾಮಿ, ಶ್ರೀನಿವಾಸ್ ನಾಯಕ್ ಕವಿತೆಗಳನ್ನು ವಾಚಿಸಿದರು.