10 ಜನ ದರೋಡೆಕೋರರ ಸೆರೆ

15chn2
Published on

ಚಾಮರಾಜನಗರ: ಸಿನಿಮೀಯ ರೀತಿ ನಡೆದಿದ್ದ ದರೋಡೆ ಪ್ರಕರಣ ಭೇದಿಸಿರುವ ಪೊಲೀಸರು ಕೇರಳ ಮೂಲದ 10 ಆರೋಪಿಗಳನ್ನು ಬಂಧಿಸಿ, 21 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಕಾರು, ವಾಚು ಮತ್ತು ಮೊಬೈಲ್ ಅನ್ನು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಬೆಂಡಗಳ್ಳಿ ಗೇಟ್ ಸಮೀಪ ಸೆ.27ರ ಮಧ್ಯರಾತ್ರಿ 12 ಗಂಟೆ ಸುಮಾರು ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಕೇರಳದ ನೀಲಾಚರಂನ ರಹೀಂ ಅವರು ಸ್ನೇಹಿತ ನೌಫಲ್ ಜತೆ ಕಾರಿನಲ್ಲಿ 40 ಲಕ್ಷ ರೂ. ತೆಗೆದುಕೊಂಡು ಕೇರಳಕ್ಕೆ ಹೋಗುತ್ತಿದ್ದರು. ಈ ವೇಳೆ 10ಕ್ಕೂ ಹೆಚ್ಚು ಜನರ ಗುಂಪು ಮೂರು ಕಾರುಗಳಲ್ಲಿ ಬಂದು ಇವರನ್ನು ಅಡ್ಡಗಟ್ಟಿ 40 ಲಕ್ಷ ರೂ., ಒಂದು ಮೊಬೈಲ್ ಹಾಗೂ ಬೆಲೆಬಾಳುವ ವಾಚ್ ಅನ್ನು ಸಿನಿಮೀಯ ಮಾದರಿಯಲ್ಲಿ ದರೋಡೆ ಮಾಡಿ ಪರಾರಿಯಾಗಿತ್ತು.

ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಿ ಸಾಹು, ಬೇಗೂರು ವೃತ್ತ ನಿರೀಕ್ಷಕ ಎ.ಸಿ.ವನರಾಜು ನೇತೃತ್ವದಲ್ಲಿ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಶ್ರೀಕಾಂತ್, ಬೇಗೂರು ಠಾಣೆ ಪಿಎಸ್‌ಐ ಚರಣ್ ಗೌಡ, ತೆರಕಣಾಂಬಿ ಪಿಎಸ್‌ಐ ಈಶ್ವರ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್, ಪೊಲೀಸ್ ಉಪಾಧೀಕ್ಷಕ ಲಕ್ಷ್ಮಯ್ಯ ಮಾರ್ಗದರ್ಶನದಲ್ಲಿ ಪ್ರಕರಣ ವರದಿಯಾದ 8 ದಿನಗಳಲ್ಲಿ ಕೇರಳ, ತಮಿಳುನಾಡು, ಗೋವಾ ಕಡೆಗಳಿಗೆ ತೆರಳಿ ಆರೋಪಿಗಳ ಬಗ್ಗೆ ತನಿಖಾ ತಂಡವು ಮಾಹಿತಿ ಸಂಗ್ರಹಿಸಿತ್ತು. ಅ.14ರಂದು 10 ಜನ ಆರೋಪಿಗಳನ್ನು ವಶಕ್ಕೆ ಪಡೆದು, 21 ಲಕ್ಷ ರೂ. ನಗದು, 4 ಲಕ್ಷ ರೂ. ಮೌಲ್ಯದ ಕಾರು, 30 ಸಾವಿರ ರೂ. ಮೌಲ್ಯದ ದುಬಾರಿ ವಾಚು, 10 ಸಾವಿರ ರೂ. ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳು ಪತ್ತೆಯಾಗಬೇಕಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವನ್ನು ಎಸ್ಪಿ ಪದ್ಮಿನಿ ಸಾಹು ಪ್ರಶಂಸಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net