

ಚಾಮರಾಜನಗರ : ನಾಡಹಬ್ಬ ದಸರಾ ಗತವೈಭವವನ್ನು ಮನೆಮನೆಯಲ್ಲಿ ಸಾರುತ್ತಿದ್ದ ಗೊಂಬೆಗಳ ಪ್ರದರ್ಶನ ಪ್ರಸ್ತುತ ನೇಪಥ್ಯಕ್ಕೆ ಸರಿಯುತ್ತಿದೆ. ನವರಾತ್ರಿಯ ಹಿನ್ನೆಲೆಯನ್ನು ಬಿಂಬಿಸುವ ಈ ಸಾಂಪ್ರದಾಯಿಕ ಆಚರಣೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮೈಸೂರು ಮತ್ತು ಚಾಮರಾಜನಗರದ ಐತಿಹಾಸಿಕ ಹಾಗೂ ಪೌರಾಣಿಕ ಪರಂಪರೆಯಲ್ಲಿ ನವರಾತ್ರಿ ಸಂಭ್ರಮ ಅತ್ಯಂತ ಮಹತ್ವದ್ದಾಗಿದೆ. ಒಂಬತ್ತು ದಿನಗಳ ಕಾಲ ಹೋರಾಡಿದ ದುರ್ಗಾದೇವಿ ಯುದ್ಧವನ್ನು ಗೆದ್ದ ಕಾರಣದಿಂದ ಹಾಗೂ ಲಕ್ಷ್ಮೀನಾರಾಯಣ ಸ್ವರೂಪದಲ್ಲಿ ಮನೆಮನೆಗಳಲ್ಲಿ ಮಹಿಳೆಯರು ಗೊಂಬೆಯನ್ನು ಕೂರಿಸಿ, ಪುರಾಣ, ಪುಣ್ಯ ಕಥೆಗಳನ್ನು ಗೊಂಬೆಗಳ ಮೂಲಕ ಪ್ರಚುರಪಡಿಸಿ, ಪೂಜಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಚಾಮರಾಜನಗರದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಸಾಕಷ್ಟು ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದರು. ನವರಾತ್ರಿಯ ಸಂದರ್ಭದಲ್ಲಿ ಗೊಂಬೆಗಳನ್ನು ಕೂರಿಸುವ ಮನೆಗಳನ್ನು ಪ್ರವೇಶ ಮಾಡಿದರೆ ಸಾಕು ಭಿನ್ನ-ವಿಭನ್ನವಾದ ಗೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಪ್ರತಿವರ್ಷವೂ ಬೊಂಬೆ ಪ್ರದರ್ಶನ ಏರ್ಪಡಿಸಿ ಪೌರಾಣಿಕ, ಐತಿಹಾಸಿಕ ಮತ್ತು ಸಾಂಪ್ರದಾಯಿಕ ಶೈಲಿಯಲ್ಲಿ ದಸರಾ ಗತವೈಭವವನ್ನು ಸಾರುತ್ತಿದ್ದರು.
ಪ್ರಸ್ತುತ ಆಧುನಿಕತೆಯ ಹೊಡೆತಕ್ಕೆ ಸಿಲುಕಿರುವ ಜನತೆ ನವರಾತ್ರಿಯ ಸಮಯದಲ್ಲಿ ಗೊಂಬೆ ಪ್ರದರ್ಶನದಿಂದ ಹಿಂದೆ ಸರಿಯುತ್ತಿದ್ದಾರೆ. ಈ ಮೂಲಕ ನಮ್ಮ ಪರಂಪರೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಈ ಒಂದು ಸಂಪ್ರದಾಯವನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸಾರ್ವಜನಿಕರು ಜಾಗೃತರಾಗಬೇಕು. ಗೊಂಬೆ ಪ್ರದರ್ಶನವನ್ನು ಜಿಲ್ಲೆಯಲ್ಲಿ ಉಳಿಸಿ ಬೆಳೆಸಿಕೊಂಡು ಹೋಗಲು ಆಡಳಿತ ವ್ಯವಸ್ಥೆಯೂ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಸ್ಥಳೀಯರಾದ ಸುರೇಶ್ ಎನ್.ಋಗ್ವೇದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಸರಾ ಗೊಂಬೆಗಳ ಹಿನ್ನೆಲೆ: ದುರ್ಗಾ ದೇವಿ ರಾಕ್ಷಸರ ವಿರುದ್ಧ ಯುದ್ಧ ಮಾಡುವಾಗ ಅವಳಿಗೆ ಎಲ್ಲ ದೇವತೆಗಳು ಶಕ್ತಿಯನ್ನು ನೀಡಿ ಶಕ್ತಿಹೀನರಾಗಿ ಪ್ರತಿಮೆಗಳಂತೆ ನಿಂತರು. ಬಳಿಕ ದಸರಾ ಆಚರಿಸಲಾಗುವುದು ಎಂದು ಪುರಾಣದಲ್ಲಿ ಉಲ್ಲೇಖವಿದೆ. ದೇವತೆಗಳ ಶಕ್ತಿಯ ತ್ಯಾಗಕ್ಕೆ ಗೌರವ ಸಲ್ಲಿಸಲು ಗೊಂಬೆಗಳ ರೂಪದಲ್ಲಿ ದೇವರನ್ನು ಪೂಜಿಸುವ ಮೂಲಕ ದಸರಾ ಗೊಂಬೆ ಹಬ್ಬವನ್ನು ಆಚರಿಸಲಾಗುತ್ತದೆ. ವಿಜಯದಶಮಿ ದಿನದಂದು ಈ ಆಚರಣೆ ಅಂತ್ಯಗೊಳ್ಳುತ್ತದೆ. 9 ದಿನಗಳ ಕಾಲ ಹೋರಾಡಿದ ನಂತರ ದುರ್ಗಾದೇವಿ ರಾಕ್ಷಸರ ವಿರುದ್ಧ ಯುದ್ಧವನ್ನು ಗೆದ್ದ ದಿನವನ್ನು ದಸರಾ ಹಬ್ಬವಾಗಿ ಸಡಗರದಿಂದ ಆಚರಿಸಲಾಗುತ್ತದೆ. ವಿವಿಧ ಬಗೆಯ ಗೊಂಬೆಗಳನ್ನು ಜೋಡಿಸಿ ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ.
ಪಟ್ಟದ ಗೊಂಬೆಯೇ ಪ್ರಧಾನ: ನವರಾತ್ರಿ ಗೊಂಬೆಗಳ ಆಚರಣೆಯಲ್ಲಿ ಗಂಡ ಮತ್ತು ಹೆಂಡತಿಯ ಗೊಂಬೆಗಳನ್ನು ಪಟ್ಟದ ಗೊಂಬೆ ಎಂದು ಕರೆಯಲಾಗಿದ್ದು ಇದೇ ಪ್ರಧಾನ ಗೊಂಬೆಗಳಾಗಿವೆ. ಪಟ್ಟದ ಗೊಂಬೆಗಳು ಸಾಂಪ್ರದಾಯಿಕವಾಗಿ ಮರದಿಂದ ಮಾಡಿದ ಗೊಂಬೆಗಳಾಗಿವೆ. ಈ ಗೊಂಬೆಗಳನ್ನು ರೇಷ್ಮೆ ಬಟ್ಟೆ ಬಳಸಿ ಸುಂದರವಾಗಿ ಅಲಂಕರಿಸಲಾಗುತ್ತದೆ. ಪೂಜೆಗೆ ಗೊಂಬೆಗಳನ್ನು ಜೋಡಿಸುವಾಗ ವೇದಿಕೆಯ ಮೊದಲ ಮೆಟ್ಟಿಲಲ್ಲಿ ದೇವತೆಗಳ ಗೊಂಬೆಗಳನ್ನು ಜೋಡಿಸುವ ಸಂಪ್ರದಾಯವಿದೆ. ಈ ಸಾಲಿನಲ್ಲಿ ರಾಮ, ಲಕ್ಷ್ಮಣ, ಸೀತೆ, ಕೃಷ್ಣ, ದುರ್ಗಾ, ಲಕ್ಷ್ಮೀ, ಸರಸ್ವತಿ ಇಂತಹ ಮೂರ್ತಿಗಳನ್ನು ಇಟ್ಟು ಪೂಜಿಸಲಾಗುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮರೆಯಾಗುತ್ತಿದೆ ವಿಶೇಷ ಆಚರಣೆ: ನವರಾತ್ರಿ ಹಬ್ಬದ ಆಚರಣೆ ಹಾಗೂ ದಸರಾ ಸಂಭ್ರಮದಲ್ಲಿ ವಿಶೇಷ ಆಚರಣೆಯಾದ ಗೊಂಬೆ ಕೂರಿಸುವ ಪರಂಪರೆ ಆಧುನಿಕತೆಯ ಹೊಡೆತಕ್ಕೆ ಸಿಕ್ಕಿ ಮರೆಯಾಗುತ್ತಿದೆ. ಅನಾದಿಕಾಲದಿಂದಲೂ ರೂಢಿಯಲ್ಲಿರುವ ಈ ಪದ್ಧತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಚರಣೆ ಮಾಡುತ್ತಿದ್ದರು. ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ ಕೆಲವು ಮನೆಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಈ ಆಚರಣೆಯನ್ನು ಮಾಡುತ್ತಿಲ್ಲ.
ಅಗತ್ಯ ಪ್ರೋತ್ಸಾಹ ಬೇಕಿದೆ:ನೇಪಥ್ಯಕ್ಕೆ ಸರಿಯುತ್ತಿರುವ ಗೊಂಬೆ ಪ್ರದರ್ಶನವನ್ನು ದಸರಾ ಮಹೋತ್ಸವ ಸಂದರ್ಭದಲ್ಲಿ ಪ್ರೋತ್ಸಾಹ ಕೊಟ್ಟು ಉಳಿಸಬೇಕಾಗಿದೆ. ಜಿಲ್ಲಾಡಳಿತದ ವತಿಯಿಂದಲೇ ಗೊಂಬೆ ಕೂರಿಸುವ ಸ್ಪರ್ಧೆಯನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬಹುದಾಗಿದೆ. ವಸ್ತು ಪ್ರದರ್ಶನದ ಸಂದರ್ಭದಲ್ಲಿ ಗೊಂಬೆಗಳ ಪ್ರದರ್ಶನ ಏರ್ಪಡಿಸಿ ಅದರ ಹಿನ್ನೆಲೆ ಮತ್ತು ಮಹತ್ವವನ್ನು ಇಂದಿನ ತಲೆಮಾರಿಗೆ ತಿಳಿಸಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕಾರ್ಯಕ್ರಮಗಳು ರೂಪುಗೊಂಡರೆ ನಶಿಸಿಹೋಗುತ್ತಿರುವ ಗೊಂಬೆ ಕೂರಿಸುವ ಆಚರಣೆಯನ್ನು ಪೋಷಿಸಬಹುದಾಗಿದೆ.
ನವರಾತ್ರಿ ಸಂದರ್ಭದಲ್ಲಿ ಗೊಂಬೆ ಕೂರಿಸುವ ಆಚರಣೆ ಮೈಸೂರಿನಲ್ಲಿ ಹೆಚ್ಚು. ಜಿಲ್ಲೆಯಲ್ಲಿ ಇದು ಕಡಿಮೆಯಾಗುತ್ತಾ ಬರುತ್ತಿದೆ. ಈ ಬಾರಿಯ ದಸರಾ ಮಹೋತ್ಸವದ ಸಭೆಯಲ್ಲಿ ಈ ಕುರಿತು ಚರ್ಚಿಸಿದ್ದರೆ ಕಾರ್ಯಕ್ರಮ ರೂಪಿಸಬಹುದಿತ್ತು. ಮುಂದಿನ ದಿನಗಳಲ್ಲಿ ಗೊಂಬೆ ಕೂರಿಸುವ ಸ್ಪರ್ಧೆ ಆಯೋಜಿಸಲು ಚಿಂತನೆ ನಡೆಸಲಾಗುತ್ತದೆ.ಗುರುಲಿಂಗಯ್ಯ ಉಪ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಾಮರಾಜನಗರ. ಗೊಂಬೆ ಕೂರಿಸುವ ಪದ್ಧತಿ ಪುರಾತನ ಕಾಲದಿಂದಲೂ ನಡೆದು ಬಂದಿದೆ. ಇದು ನಮ್ಮ ಸಂಸ್ಕೃತಿ, ಪರಂಪರೆಯ ಭಾಗವಾಗಿದೆ. ಇದಕ್ಕೆ ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ. ದಸರಾ ಸಂಭ್ರಮದಲ್ಲಿ ವಿಶೇಷ ಮಹತ್ವವಿದ್ದು , ಸರ್ಕಾರ, ಸಂಘ ಸಂಸ್ಥೆಗಳು ಪ್ರೋತ್ಸಾಹಿಸಲು ಅವಕಾಶ ಮಾಡಿಕೊಡಬೇಕು.ಸುರೇಶ್ ಎನ್.ಋಗ್ವೇದಿ ಅಧ್ಯಕ್ಷರು, ಜೈಹಿಂದ್ ಪ್ರತಿಷ್ಠಾನ, ಚಾಮರಾಜನಗರ ನವರಾತ್ರಿ ಮಹಿಳೆಯರಿಗೆ ವಿಶೇಷ ಹಬ್ಬವಾಗಿದೆ. ಗೊಂಬೆ ಕೂರಿಸುವ ಪದ್ಧತಿಯಿಂದ ದಸರಾ ಮಹತ್ವ, ಸಂಸ್ಕೃತಿ ಪ್ರಜ್ಞೆಯನ್ನು, ಸಾಮಾಜಿಕ ಮೌಲ್ಯವನ್ನು ಹೆಚ್ಚಿಸಲು ಸ್ಫೂರ್ತಿಯನ್ನು ನೀಡುತ್ತದೆ. ಆಧುನಿಕತೆಯ ಪರಿಸರದಲ್ಲಿ ಗೊಂಬೆ ಕೂರಿಸುವ ಪದ್ಧತಿ ಕಡಿಮೆಯಾಗುತ್ತಿದ್ದು ಪ್ರೋತ್ಸಾಹ ಅಗತ್ಯವಿದೆ.ವಿಜಯಲಕ್ಷ್ಮೀನಿವೃತ್ತ ಮುಖ್ಯ ಶಿಕ್ಷಕಿ, ಚಾಮರಾಜನಗರ.