ವೃದ್ಧಾಪ್ಯದಲ್ಲೂ ಕುಗ್ಗದ ಕೃಷಿ ಪ್ರೀತಿ

14hnr1
Published on

ಹನೂರು: ಓದಿದ್ದು ಬಿ.ಎಸ್ಸಿ. ಆದರೆ ನನಗೆ ಮೊದಲಿನಿಂದಲೂ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಹಾಗಾಗಿ ಉದ್ಯೋಗವನ್ನು ಬಿಟ್ಟು ಕೃಷಿಯಲ್ಲಿ ತೊಡಗಿದೆ. ಏಳು ಬೀಳುಗಳನ್ನು ಕಂಡೆ. ಆದರೀಗ ಈ ಕಾಯಕ ನೆಮ್ಮದಿಯ ಬದುಕನ್ನು ರೂಪಿಸಿಕೊಟ್ಟಿದೆ.

ಇದು ಹನೂರು ತಾಲೂಕಿನ ಡಿ.ಎಂ ಸಮುದ್ರ (ಗೂಳ್ಯ) - ಭೈರನತ್ತ ಮಾರ್ಗಮಧ್ಯೆ ಜಮೀನನ್ನು ಹೊಂದಿರುವ ಬೆಂಗಳೂರು ಸಮೀಪದ ಆನೆಕಲ್ ತಾಲೂಕಿನ ಹೆನ್ನಾಗರ ಗ್ರಾಮದ 74 ವಯಸ್ಸಿನ ರೈತ ವೆಂಕಟೇಶ್ ವಿಜಯವಾಣಿಯೊಂದಿಗೆ ಹಂಚಿಕೊಂಡ ಮನದಾಳದ ಮಾತು.
ಬೇಸಾಯದ ಬಗ್ಗೆ ಆಸಕ್ತಿ ಹೊಂದಿದ ಇವರು ಚಿಕ್ಕ ವಯಸ್ಸಿನಲ್ಲಿಯೇ ತಂದೆ, ತಾಯಿ ಹಾಗೂ ಕುಟುಂಬಸ್ಥರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದರು. ಕಾಲೇಜು ಹಂತದಲ್ಲೂ ಸಹ ಓದಿನ ಜತೆಗೆ ಹೆಚ್ಚು ಸಮಯ ಜಮೀನಿನಲ್ಲಿಯೇ ಕಾಲ ಕಳೆಯುತ್ತಿದ್ದರು. ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಬಿ.ಎಸ್ಸಿ ಶಿಕ್ಷಣ ಪಡೆದು, 2 ವರ್ಷ ಪಿಡಬ್ಯುಡಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಫೀಲ್ಡ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು. ಆದರೆ ಈ ವೇಳೆಗಾಗಲೇ ಕಾರ್ಯದೊತ್ತಡ ಹೆಚ್ಚಾದ್ದರಿಂದ ಈ ಕರ್ತವ್ಯಕ್ಕಿಂತ ಕೃಷಿ ಕಾಯಕವೇ ಲೇಸು ಎಂದು ಅರಿತು ತಮ್ಮ ಸ್ವಂತ ಬಲದ ಮೇಲೆ ನಿಲ್ಲಲು ನಿರ್ಧರಿಸಿದರು.

ತನ್ನ ಪಾಲಿಗೆ ಬಂದಿದ್ದ 1 ಎಕರೆಯನ್ನು ಸಹೋದರರಿಗೆ ಬಿಟ್ಟು ಕೊಟ್ಟು ಬೆಂಗಳೂರಿನಲ್ಲಿ ಜಮೀನನ್ನು ಖರೀದಿಸಲು ಮುಂದಾದರು. ಆದರೆ ಭೂಮಿ ಖರೀದಿ ಬೆಲೆ ಹೆಚ್ಚಾದ್ದರಿಂದ 2020ರಲ್ಲಿ ಹನೂರಿನತ್ತ ಮುಖ ಮಾಡಿದ್ದರು. ಈ ವೇಳೆಗಾಗಲೇ ಕೋವಿಡ್ ಮಹಾಮಾರಿ ತಾಂಡವಾಡುತ್ತಿತ್ತು. ಆದರೆ ಇದಕ್ಕೂ ಬಗ್ಗದ ಇವರು ಕೃಷಿ ಮಾಡಲೇಬೇಕು ಎಂಬ ಛಲವನ್ನು ಹೊಂದುವುದರ ಮೂಲಕ ಈ ಭಾಗದಲ್ಲಿ ಸಂಚರಿಸಿ ಗೂಳ್ಯ ಸಮೀಪದ ಶಿವಮಲ್ಲಪ್ಪ ಎಂಬುವರಿಂದ 10 ಎಕರೆ ಜಮೀನನ್ನು ಖರೀದಿಸಿ ಕೃಷಿ ಆರಂಭಿಸಿದರು. ಅರಿಶಿಣ ಹಾಗೂ ಜೋಳವನ್ನು ಬೆಳೆದರು. ನಷ್ಟ ಉಂಟಾದರೂ ಎದೆಗುಂದಲಿಲ್ಲ. ಈ ಭಾಗದಲ್ಲಿನ ಕೃಷಿಯ ಬಗ್ಗೆ ಸ್ಥಳೀಯರ ಮಾಗದರ್ಶನ ಪಡೆದು ಮುನ್ನೆಡೆದರು. ಆದರೀಗ ಕೃಷಿಯಲ್ಲಿ ಯಶಸ್ಸು ಕಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಮೊದಲ ಬಾರಿಗೆ ಕಡಲೆಕಾಯಿ:
ಜಮೀನಿನಲ್ಲಿ 4 ಕೊಳವೆ ಬಾವಿಗಳಿದ್ದು, ಹನಿ ನೀರಾವರಿಯ ಮೂಲಕ ಕೊಟ್ಟಿಗೆ ಗೊಬ್ಬರವನ್ನು ಬಳಸಿ ಕೃಷಿ ಮಾಡುತ್ತಿದ್ದು, ಪ್ರಸ್ತುತ ಇವರು 5 ಎಕರೆಯಲ್ಲಿ ಅರಿಸಿಣವನ್ನು ಬೆಳೆದಿದ್ದಾರೆ. ಜತೆಗೆ 2 ಎಕರೆಯಲ್ಲಿ ಗೊಬ್ಬರವನ್ನು ಬಳಸದೇ ರಾಗಿಯನ್ನು ಬೆಳೆದಿದ್ದು, ತೆನೆಗಳು ಹುಲುಸಾಗಿ ಬಂದಿವೆ. ಇದನ್ನು ನೋಡಿದರೆ ಎಲ್ಲರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಇನ್ನು ಇದೇ ಮೊದಲ ಬಾರಿಗೆ 1 ಎಕರೆಯಲ್ಲಿ ಕಡಲೆಕಾಯಿಯನ್ನು ಬೆಳೆದಿದ್ದು, ಇನ್ನೇನೋ ಕೀಳುವ ಹಂತದಲ್ಲಿದೆ. ಇನ್ನುಳಿದ 2 ಎಕರೆಯನ್ನು ಹದ ಮಾಡಿಸಿದ್ದು, ಈ ಭಾಗದಲ್ಲಿ ಕೆಂಪು ಮಣ್ಣಿನಿಂದ ಎಲ್ಲೂ ಬೆಳೆಯದ ಆಲೂಗೆಡ್ಡೆಯನ್ನು ಬಿತ್ತನೆ ಮಾಡಲು ಮುಂದಾಗಿದ್ದಾರೆ. ಇದು ಇತರರಿಗೆ ಸ್ಫೂರ್ತಿಯಾಗಲಿದೆ. ಜತೆಗೆ 150 ತೆಂಗಿನ ಸಸಿಗಳನ್ನು ನೆಡುವ ಕಾರ್ಯವನ್ನು ಆರಂಭಿಸಿರುವುದು ಇವರ ಕೃಷಿ ಮೇಲಿನ ಕಾಳಜಿ ಎಂತದ್ದು ಎಂಬುದನ್ನು ತೋರಿಸುತ್ತದೆ.

ಕೋಳಿಫಾರಂ ಸ್ಥಾಪಿಸಲು ನಿರ್ಧಾರ:
ಉತ್ತಮ ಮಾದರಿ ತೋಟವಾಗಿಸುವ ಉದ್ದೇಶದಿಂದ ಜಮೀನಿನ ಸುತ್ತಲೂ ತಂತಿಬೇಲಿಯನ್ನು ನಿರ್ಮಿಸಲಾಗಿದೆ. ಅಲ್ಲದೇ ಇತ್ತೀಚೆಗೆ ವಿದ್ಯುತ್ ಸಮಸ್ಯೆಯನ್ನು ಅರಿತು, ಸೋಲಾರ್ ಬೋರ್ ಕೊರೆಸಲು ಚಿಂತನೆ ನಡೆಸಿದ್ದಾರೆ. ಈಗಾಗಲೇ ಹೊಸದಾಗಿ 3 ಲಕ್ಷ ರೂ. ವೆಚ್ಚದಲ್ಲಿ ಬೃಹತ್ತಾದ ನೀರು ಸಂಗ್ರಹಣ ತೊಟ್ಟಿಯನ್ನು ನಿರ್ಮಿಸಲಾಗಿದೆ. ಬೆಂಗಳೂರಿನಲ್ಲಿ ಈ ಹಿಂದೆ ಜಾನುವಾರುಗಳನ್ನು ಸಾಕಾಣೆ ಮಾಡುತ್ತಿದ್ದ ಇವರು ಕೋಳಿಫಾರಂ ಸ್ಥಾಪಿಸಲು ನಿರ್ಧರಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೈನುಗಾರಿಕೆ ಜತೆಗೆ ಸಮಗ್ರ ಕೃಷಿಯ ಒಲವು ಇವರದ್ದು. ಈ ಬಗ್ಗೆ ಸ್ಥಳೀಯ ರೈತರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಕೃಷಿ ಉಪಕರಣಗಳ ಖರೀದಿ:
ಇಳಿ ವಯಸ್ಸಿನಲ್ಲಿ ಜಮೀನನ್ನು ಖರೀದಿಸಿ ಅಭಿವೃದ್ಧಿ ಹೊಂದುತ್ತಿರುವ ಇವರು ಕೃಷಿಯಲ್ಲಿ ಇನ್ನಿಲ್ಲದ ಆಸಕ್ತಿ ವಹಿಸಿದ್ದಾರೆ. ಬೆಳೆಗಳಿಗೆ ರೋಗರುಜಿನಗಳ ಕಾಡದಂತೆ ಕಾಲಕಾಲಕ್ಕೆ ಔಷಧಗಳನ್ನು ಸಿಂಪಡಿಸುತ್ತಿದ್ದಾರೆ. ಇನ್ನು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಟ್ರ್ಯಾಕರ್, ಟ್ರಿಲ್ಲರ್ ಮಿಷನ್ ಹಾಗೂ ಇನ್ನಿತರೆ ಸಾಧನ ಸಲಕರಣೆಗಳನ್ನು ಖರೀದಿಸಿದ್ದು, ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕೃಷಿಯಲ್ಲೇ ನಿತ್ಯದ ಬದುಕು:
ಜಮೀನಿನಲ್ಲೇ ಮನೆಯನ್ನು ನಿರ್ಮಿಸಿಕೊಂಡು, ಕೃಷಿ ಕಾಯಕದಲ್ಲೇ ನಿತ್ಯದ ಬದುಕನ್ನು ಕಂಡುಕೊಳ್ಳುತ್ತಿದ್ದಾರೆ. ಇವರ ಪತ್ನಿ ಹಾಗೂ ಮಗಳು ಇವರ ಕೃಷಿ ಕಾಯಕಕ್ಕೆ ಸಾಥ್ ನೀಡುತ್ತಿದ್ದಾರೆ. ಜಮೀನಿನ ಫಸಲಿನ ಮಧ್ಯೆ ಕ್ಯಾರೆಟ್, ಬೀನ್ಸ್, ಬೀಟ್‌ರೋಟ್, ಬೆಂಡೇಕಾಯಿ, ಈರುಳ್ಳಿ ಹಾಗೂ ಇನ್ನಿತರೆ ಕಡೆಗಳಲ್ಲಿ ಟೋಮ್ಯಾಟೊ, ಬದನೆಕಾಯಿ, ಮೆಣಸಿಕಾಯಿ, ಬೆಳ್ಳುಳ್ಳಿ, ಮೂಲಂಗಿ ಹಾಗೂ ವಿವಿಧ ರೀತಿಯ ಸೊಪ್ಪುಗಳು ಸೇರಿದಂತೆ ಇನ್ನಿತರೆ ತರಕಾರಿಗಳನ್ನು ಬೆಳೆದಿದ್ದು, ಮನೆ ಬಳಕೆಗೆ ಬಳಸುತ್ತಿರುವುದು ನಿಜಕ್ಕೂ ಮೆಚ್ಚುವ ಸಂಗತಿ. ಒಟ್ಟಾರೆ ಬಿ,ಎಸ್ಸಿ ಶಿಕ್ಷಣ ಪಡೆದು ನಿರ್ವಹಿಸುತ್ತಿದ್ದ ಉದ್ಯೋಗವನ್ನು ಬಿಟ್ಟು ಸ್ಥಳೀಯರ ಸಹಕಾರ ಪಡೆದು ಹನೂರು ಭಾಗದಲ್ಲಿ ಸ್ವಂತ ಬಲದ ಮೇಲೆ ಕೃಷಿಯಲ್ಲಿ ತೊಡಗಿದ್ದು, ಅಭಿವೃದ್ಧಿ ಹೊಂದುತ್ತಿರುವುದು ಇತರೆ ರೈತರಿಗೆ ಮಾದರಿ ಎನ್ನಬಹುದು.

ನಾನು ವಿದ್ಯಾವಂತನಾದರೂ ಕೃಷಿ ಉತ್ತಮ ಬದುಕೆನೆಂಬುದನ್ನು ತೋರಿಸಿಕೊಟ್ಟಿದೆ. ಇಲ್ಲಿನ ವಾತವರಣ ಉತ್ತಮ ಆರೋಗ್ಯವನ್ನು ಹೊಂದುವಂತೆ ಮಾಡಿದೆ. ಹಾಗಾಗಿ ಕೃಷಿಯೇ ನನ್ನ ನಿತ್ಯ ಬದುಕಾಗಿದ್ದು, ಸಂಪೂರ್ಣ ಕಾಯಕದಲ್ಲಿ ತೊಡಗಿಸಿಕೊಂಡಿರುತ್ತೇನೆ. ಇನ್ನಿಲ್ಲದ ಖುಷಿ ಈ ಕಾಯಕದಲ್ಲಿ ಸಿಗುತ್ತಿದೆಯೆಂದರೆ ಜೀವನಕ್ಕೆ ಇನ್ಯಾವ ಕೆಲಸ ಬೇಕು.ವೆಂಕಟೇಶ್, ರೈತ, ಹನೂರು. ನಮ್ಮಪ್ಪನಂತೆ ನಾನು ಸಹ ಬಿ.ಎಸ್ಸಿ ಪದವಿ ಪಡೆದಿದ್ದೇನೆ. ನನಗೂ ಸಹ ಹಿಂದಿನಿಂದಲೂ ಕೃಷಿ ಎಂದರೆ ಅಚ್ಚುಮೆಚ್ಚು. ಆದರೆ ನಮ್ಮ ತಂದೆ ಈ ವಯಸ್ಸಿನಲ್ಲೂ ಕೃಷಿ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಹಾಗಾಗಿ ಅವರ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಾ ಬರಲಾಗುತ್ತಿದೆ.ದಿವ್ಯಾ, ವೆಂಕಟೇಶ್ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net