

ಚಾಮರಾಜನಗರ: ಪೌರಕಾರ್ಮಿಕರ ಭವನಕ್ಕೆ ಸರ್ಕಾರದಿಂದ 2ಎಕರೆ ಜಮೀನು ಮಂಜೂರು ಮಾಡಲು ಶ್ರಮವಹಿಸಿದ ತಹಶೀಲ್ದಾರ್ ಬಸವರಾಜು ಅವರನ್ನು ಸಾಯಿ ಕರ್ಮಚಾರಿಗಳ ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಪೌರಕಾರ್ಮಿಕರು ಹಾಗೂ ಸಾಯಿ ಕರ್ಮಚಾರಿಗಳ ಸಂಘಟನೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೌರಕಾರ್ಮಿಕರ ಭವನ, ಸಫಾಯಿ ಕರ್ಮಚಾರಿ ಮಕ್ಕಳ ವಿದ್ಯಾರ್ಥಿ ನಿಲಯ, ಸಮುದಾಯ ಅಭಿವೃದ್ದಿಗಾಗಿ ತಾಲೂಕಿನ ಕಸಬಾ ಹೋಬಳಿ ಉತ್ತುವಳ್ಳಿ ಗ್ರಾಮದ ಸರ್ವೆ ನಂ. 117ರಲ್ಲಿ 2 ಎಕರೆ ಜಮೀನು ಮಂಜೂರು ಮಾಡಿಸಿಕೊಡುವಂತೆ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣ ಸಮಿತಿಯ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಸರ್ಕಾರ 2 ಎಕರೆ ಜಮೀನು ಮಂಜೂರು ಮಾಡಿದೆ ಎಂದರು.
ಇದೇ ವೇಳೆ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣ ಸಮಿತಿಯ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಮಾತನಾಡಿ, ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ 2 ಎಕರೆ ಜಮೀನು ಮಂಜೂರು ಮಾಡಿರುವುದು ತುಂಬಾ ಸಂತಸದ ವಿಷಯವಾಗಿದೆ. ಇದು ಇಡೀ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಸಮುದಾಯದ ಪರವಾಗಿ ತಾಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರವನ್ನು ಈ ಮೂಲಕ ಅಭಿನಂದಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಾಯಿ ಕರ್ಮಚಾರಿ ಮುಖಂಡ ಯ.ಸಿ.ಕೃಷ್ಣ ಸ್ವಾಮಿನಾಥ್,ಮುರುಗೇಶ್, ಕದಂಬ ನಾ.ಅಂಬರೀಶ್, ಎಂ.ರಾಜೇಂದ್ರ, ಸೋಮವಾರಪೇಟೆ ಕುಮಾರ್, ಎಸ್.ವಿಜಯ, ಸಾಗರ್‌ತಿಲಕ್, ಪ್ರಕಾಶ್, ತೊಳಸಮ್ಮ, ಸುಮತಿ, ಸೋಮ, ರಾಕೇಶ್, ಮಂಜು, ರಾಜುಬಾಯಿ ಇತರರು ಹಾಜರಿದ್ದರು.