ನಾಲ್ವಡಿ ಕೃಷ್ಣರಾಜ ಒಡೆಯರ್ ಸೇವೆ ಅನನ್ಯ

5raju9
Published on

ಚಾಮರಾಜನಗರ: ಮೈಸೂರು ಪ್ರಾಂತ್ಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ ಅನನ್ಯವಾದದ್ದು ಎಂದು ಮುಖಂಡ ಅರಕಲವಾಡಿ ನಾಗೇಂದ್ರ ಬಣ್ಣಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 137 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಮೈಸೂರು ಸಂಸ್ಥಾನದಲ್ಲಿ ಅಪಾರವಾದ ಬದಲಾವಣೆಗಳನ್ನು ಕಾಣಬಹುದು. ಮಿಲ್ಲರ್ ಆಯೋಗ ರಚನೆ ಮಾಡುವ ಮೂಲಕ ತಳಸಮುದಾಯಗಳಿಗೆ ಪ್ರಪ್ರಥಮವಾಗಿ ಮೀಸಲಾತಿ ಕಲ್ಪಿಸಿದರು.ಶಿಂಷಾದಲ್ಲಿ ಏಷ್ಯಾದ ಮೊದಲ ವಿದ್ಯುತ್ ಘಟಕ ಸ್ಥಾಪನೆ, ಮೈಸೂರು ವಿಶ್ವವಿದ್ಯಾನಿಲಯ, ಮಹಿಳಾ ಕಾಲೇಜು, ಕಾರ್ಖಾನೆಗಳು, ಪ್ರಜಾ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕೃಷ್ಣರಾಜ ಅಣೆಕಟ್ಟು, ಮಾರಿಕಣಿವೆ, ಕಬಿನಿ ನೀರಾವರಿ ಯೋಜನೆ, ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ನಾಲ್ವಡಿಯವರು ಸ್ಪರ್ಶಿಸದ ಕ್ಷೇತ್ರವಿಲ್ಲ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ದೇಶದಲ್ಲಿ ಅನೇಕ ರಾಜರು ಆಳ್ವಿಕೆ ಮಾಡಿದ್ದಾರೆ, ಮೈಸೂರು ಪ್ರಾಂತ್ಯದ ನಾಲ್ವಡಿ ಕೃಷ್ಣರಾಜರ ಹೆಸರು ಇಂದಿಗೂ ಅಚ್ಚಳಿಯದೆ ಉಳಿದಿದೆ. ಇದಕ್ಕೆ ಅವರ ಜನಪರವಾದ ಕೆಲಸಗಳೆ ಕಾರಣ. ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಅವರು ಈ ನೆಲದಲ್ಲಿ ಜಾರಿಯಲ್ಲಿದ್ದ ದೇವದಾಸಿ ಪದ್ಧತಿಯನ್ನು ತೊಡೆದು ಹಾಕಿದರು. ಈ ನಾಡಿನ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ ಸ್ಮರಣೆ ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದರು.

ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್. ಕರುನಾಡಸೇನೆ ಶ್ರೀನಿವಾಸ ಗೌಡ, ಸಾಹಿತಿ ಹಾಗೂ ಗ್ರಾಮಲೆಕ್ಕಿಗ ಶ್ರೀಧರ್, ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಆರ್.ಎಚ್.ನಂಜುಂಡಸ್ವಾಮಿ (ಪಾಪು), ಚಾಹ ರಾಮು, ಪ್ರತಾಪ್, ಕಿಶೋರ್ ಜಟ್ಟಿ, ಮಧು ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net