

ಚಾಮರಾಜನಗರ: ಹೆಣ್ಣು ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ ಉತ್ತಮ ಅವಕಾಶ ಕಲ್ಪಿಸಿದರೆ ಸಾಧಿಸಿ ತೋರಿಸುತ್ತಾರೆ ಎಂದು ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ತಿಳಿಸಿದರು.
ತಾಲೂಕಿನ ಮಲೆಯೂರು ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಹಿಳಾ ಒಕ್ಕೂಟದ ಸದಸ್ಯರಿಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೆಣ್ಣುಮಕ್ಕಳಿಗೆ ರಕ್ಷಣೆ, ಸಮಾನತೆ ಹಕ್ಕುಗಳನ್ನು ನೀಡಬೇಕು. ಅವರ ವಿರುದ್ಧದ ತಾರತಮ್ಯವನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು.ಈ ಮೂಲಕ ಜಗತ್ತಿನ ಎಲ್ಲಾ ಹೆಣ್ಣುಮಕ್ಕಳಿಗೂ ಬದುಕು, ರಕ್ಷಣೆ, ಆರೋಗ್ಯ, ಶಿಕ್ಷಣ, ಸಮಾನತೆ, ಅವಕಾಶಗಳ ಹಕ್ಕುಗಳನ್ನು ಖಾತರಿ ಮಾಡಬೇಕು ಎಂಬುವ ಉದ್ದೇಶದಿಂದ ವಿಶ್ವಸಂಸ್ಥೆ 2012ರಿಂದ ಪ್ರತಿ ವರ್ಷ ಅ.11 ರಂದು ಹೆಣ್ಣುಮಕ್ಕಳ ಅಂತಾರಾಷ್ಟ್ರೀಯ ದಿನ ಎಂದು ಘೋಷಣೆ ಮಾಡಿದೆ ಎಂದರು.
ಸರ್ಕಾರಗಳು, ಸಮುದಾಯ, ಪ್ರತಿಯೊಂದು ಸಂಸ್ಥೆ, ಕುಟುಂಬ ಹೆಣ್ಣುಮಕ್ಕಳ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು, ಅವರ ಒಳಿತಿಗಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹದೊಂದು ವಿಶೇಷ ದಿನದಂದು ಹೆಣ್ಣುಮಕ್ಕಳ ಸಾಮರ್ಥ್ಯಗಳನ್ನು ಗುರುತಿಸುವ ಕೆಲಸಗಳೂ ಆಗಬೇಕಿದೆ. ಮಹಿಳೆಯರು ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ದಿ ಆದರೆ ಮಾತ್ರ ಬದಲಾವಣೆ ಸಾಧ್ಯವಿಲ್ಲ, ಸಾಮಾಜಿಕವಾಗಿಯೂ ಸಹ ಮುನ್ನೆಲೆಗೆ ಬರಬೇಕು ಎಂದು ತಿಳಿಸಿದರು.
ಶ್ರೀಧರ್ಮಸ್ಥಳ ಸಂಸ್ಥೆಯ ಅನಿತಾ ಮಾತನಾಡಿ, ಸಂಸ್ಥೆಯಿಂದ ಮಹಿಳಾ ಪ್ರಗತಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಹಿಳೆಯರ ಪ್ರಗತಿಯಾದರೇ, ಕುಟುಂಬದ ಪ್ರಗತಿ, ದೇಶದ ಪ್ರಗತಿಯೂ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಮಣಿ, ಸೇವಾ ಪ್ರತಿನಿಧಿ ಮಂಜುಳಾ ಹಾಗೂ ಸದಸ್ಯರು ಭಾಗವಹಿಸಿದ್ದರು.