ಮಹಿಷ ದಸರಾಕ್ಕೆ ಆಗಮಿಸುವಂತೆ ಮನವಿ

rajanna yariyuiru
Published on

ಚಾಮರಾಜನಗರ: ಮೈಸೂರಿನಲ್ಲಿ ಅ.13 ರಂದು ನಡೆಯಲಿರುವ ಮಹಿಷಾ ದಸರಾ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸುಮಾರು 5 ಸಾವಿರಕ್ಕಿಂತಲೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಮಾಹಿತಿ ನೀಡಿದರು.

ಐತಿಹಾಸಿಕ ಹಿನ್ನೆಲೆಯಿಂದ ಆಚರಣೆ ಮಾಡಿಕೊಂಡು ಬರುತ್ತಿರುವ ಮಹಿಷಾ ದಸರಾವನ್ನು ತಡೆಯುವಂತೆ ಮೈಸೂರಿನ ಸಂಸದ ಪ್ರತಾಪ್‌ಸಿಂಹ ಹೇಳಿಕೆ ನೀಡುತ್ತಿದ್ದಾರೆ. ಓಟ್‌ಬ್ಯಾಂಕ್ ರಾಜಕಾರಣದ ಹೆಸರಿನಲ್ಲಿ ಈ ನೆಲದ ಮೂಲ ನಿವಾಸಿಗಳ ಭಾವನೆಗಳನ್ನು ಘಾಸಿಗೊಳಿಸಲು ಹೊರಟಿದ್ದಾರೆ. ಈ ಕಾರಣಕ್ಕೆ ಜಿಲ್ಲೆಯಿಂದ ಮನೆಗೆ ಒಬ್ಬರಂತೆ ಸುಮಾರು 5 ಸಾವಿರಕ್ಕಿಂತಲೂ ಮಹಿಷಾ ದಸರಾದಲ್ಲಿ ಪಾಲ್ಗೊಳ್ಳಬೇಕು ಎಂದು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ದೇಶದ ಸಂವಿಧಾನದಲ್ಲಿ ಎಲ್ಲಾ ಆಚರಣೆಗಳಿಗೆ ಸಮಾನ ಅವಕಾಶಗಳಿವೆ. ಮಹಿಷಾ ದಸರಾ ಬೇಡ ಎನ್ನಲು ಇವರು ಯಾರು? ಓಬಿಸಿ ಸಮುದಾಯದಲ್ಲಿ ಬೆಳೆದು ಸಂವಿಧಾನದಡಿಯಲ್ಲಿ ಸಂಸದನಾಗಿರುವ ಇಂತಹ ನೂರಾರು ಮನಸ್ಸುಗಳಿಗೆ ಮಹಿಷ ದಸರಾ ಮೂಲಕ ತಕ್ಕ ಪಾಠ ಕಲಿಸಬೇಕಿದೆ. ಈ ಕಾರಣಕ್ಕೆ ಅ.13 ರಂದು ಬೆಳಗ್ಗೆ 7 ಗಂಟೆಗೆ ಮೈಸೂರಿಗೆ ತೆರಳಿ ಅಲ್ಲಿಂದ ಚಾಮುಂಡಿಬೆಟ್ಟಕ್ಕೆ ಸಾಗುವ ಕಾರ್ಯಕ್ರಮವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಮಹಿಷಾ ದಸರಾವನ್ನು ಯಶಸ್ವಿಗೊಳಿಸಬೇಕು ಎಂದರು.

ವಕೀಲ ಪ್ರಸನ್ನಕುಮಾರ್ ಮಾತನಾಡಿ, ಮಹಿಷಾ ದಸರಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು.
ಮೈಸೂರಿನಲ್ಲಿ ಗಲಭೆ ಸೃಷ್ಟಿಸಿ ಶಾಂತಿ ಸುವ್ಯವಸ್ಥೆ ಕದಡುವ ಸಾಧ್ಯತೆ ಇದೆ. ಆದ್ದರಿಂದ ಗೃಹ ಸಚಿವರು ಸಂಸದ ಪ್ರತಾಪ ಸಿಂಹನನ್ನು ಗಡಿಪಾರು ಮಾಡಬೇಕು. ಮಹಿಷ ದಸರಾ ಆಚರಣೆ ಸಂದರ್ಭದಲ್ಲಿ ಗಲಭೆ ಉಂಟಾದರೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ನೇರ ಹೊಣೆಯಾಗುತ್ತದೆ ಎಂದರು.

ಗೋಷ್ಟಿಯಲ್ಲಿ ರಾಮಸಮುದ್ರ ಸುರೇಶ್, ಸಿ.ಕೆ.ಮಂಜುನಾಥ್, ಸಂಘಸೇನಾ, ಕೆ.ಎಂ.ನಾಗರಾಜು, ದೊರೆಸ್ವಾಮಿ, ನಂಜುಂಡಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net