

ಚಾಮರಾಜನಗರ: ಕಾಡಂಚಿನ ಭಾಗದ ಜನರಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಿದಾಗ ಮಾತ್ರ ಕಾಡಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಸಲಹೆ ನೀಡಿದರು.
ತಾಲೂಕಿನ ಕೆ.ಗುಡಿಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವಲಯ ವ್ಯಾಪ್ತಿಯಿಂದ ಭಾನುವಾರ ಆಯೋಜಿಸಿದ್ದ 69ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ವನ್ಯಜೀವಿಗಳ ಮಹತ್ವವನ್ನು ತಿಳಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ವರ್ಷದ ವನ್ಯಜೀವಿ ಸಪ್ತಾಹ ದಿನವನ್ನು ಆಚರಿಸಿದೆ. ಈ ರೀತಿಯ ಕಾರ್ಯಕ್ರಮಗಳಿಂದ ಸಾರ್ವಜನಿಕರಿಗೆ ಅರಣ್ಯ ಜೀವಸಂಕುಲಗಳ ಬಗ್ಗೆ ಅರಿವು ಹೆಚ್ಚಾಗುತ್ತದೆ. ಗಿರಿಜನ ಬಂಧುಗಳು ಹಾಗೂ ಕಾಡಂಚಿನ ಭಾಗದ ಜನರಿಗೆ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಿದಾಗ ಕಾಡಿನ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಬಿಆರ್‌ಟಿ ಹುಲಿ ಸಂರಕ್ಷಿತಾ ವಲಯ ಅರಣ್ಯಾಧಿಕಾರಿ ದೀಪಾ ಜೆ.ಕಂಟ್ರಾಕ್ಟರ್ ಮಾತನಾಡಿ, ಜಿಲ್ಲೆಯು ಹುಲಿ, ಆನೆ ಗಣತಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇದು ಕೇವಲ ಯಾವುದೇ ಒಬ್ಬರಿಂದ ಸಾಧ್ಯವಾಗದು. ಸ್ಥಳೀಯರು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯಿಂದ ಸಾಧ್ಯವಾಗಿದೆ. ರೈತರು, ಗಿರಿಜನರು ಹಾಗೂ ಮಾಧ್ಯಮಮಿತ್ರರ ಸಂಪೂರ್ಣ ಬೆಂಬಲದಿಂದ ಉತ್ತಮ ಕಾರ್ಯಕ್ರಮಗಳ ನಡೆಸಲು ಸಾಧ್ಯವಾಗುತ್ತದೆ. 69ನೇ ವನ್ಯಜೀವಿ ಸಪ್ತಾಹ ದಿನವು ಸುಮಾರು 7 ದಿನಗಳಿಂದ ಜನರಿಗೆ ಅರಣ್ಯ ಹಾಗೂ ಜೀವ ವೈವಿಧ್ಯತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನೀಡಿ ಯಶಸ್ಸು ಕಂಡಿದೆ ಎಂದು ಹೇಳಿದರು.
ಬಸವರಾಜೇಂದ್ರ ಆಸ್ಪತ್ರೆಯ ವೈದ್ಯಾಧಿಕಾರಿ ಶ್ವೇತಾ ಮಾತನಾಡಿ, ಪ್ರಕೃತಿಯನ್ನ ಎಲ್ಲರೂ ಗೌರವಿಸಬೇಕು. ಪ್ರಕೃತಿ ತೆಗೆ ಬೆಳೆಯುವಂತಾಗಬೇಕು. ಯಾರಿಗೂ ತೊಂದರೇ ನೀಡದಂತೆ ಬದುಕಬೇಕು. ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿರುವುದು ತುಂಬಾ ಒಳ್ಳೆಯ ಕೆಲಸವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 69ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲೆ, ಮ್ಯಾರಾಥಾನ್, ಆನ್‌ಲೈನ್ ಕ್ವಿಜ್ , ಪೋಟೋಗ್ರಾಫಿ ವಿಜೇತರಿಗೆ ಬಹುಮಾನ ಪ್ರಮಾಣ ಪತ್ರ ಮತ್ತು ಸ್ಮರಣಿಕೆ ನೀಡಲಾಯಿತು. ಬಳಿಕ ಗೊರುಕನ ನೃತ್ಯದ ಮೂಲಕ ಸ್ಥಳೀಯರು ಎಲ್ಲರ ಗಮನ ಸೆಳೆದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಭಾಗವಹಿಸಿದ್ದರು.