

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆ ವತಿಯಿಂದ ಕಪ್ಪು ಬಾವುಟ ಪ್ರದರ್ಶಿಸಿ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು, ಶ್ರೀ ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು, ಕಪ್ಪುಬಾವುಟ ಹಿಡಿದು ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕಾವೇರಿ ನೀರು ಹಂಚಿಕೆಯಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬರುತ್ತಿದೆ. ಇದನ್ನು ಖಂಡಿಸಿ ಜಿಲ್ಲೆಯಲ್ಲಿ ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬರುತ್ತಿದ್ದು, ಕಪ್ಪುಬಾವುಟ ಹಿಡಿದು ಪ್ರತಿರೋಧ ತೋರಿಸಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್ಗೋಪಾಲ್, ಸೋಮವಾರಪೇಟೆ ಮಂಜು, ವರದನಾಯಕ, ವೀರಭದ್ರ, ರವಿಚಂದ್ರ ಪ್ರಸಾದ್ ಕಹಳೆ, ಚಾ.ಹ.ರಾಮು, ಲಿಂಗರಾಜು, ಗು.ಪುರುಷೋತ್ತಮ್, ತಾಂಡವಮೂರ್ತಿ ಭಾಗವಹಿಸಿದ್ದರು.