ಖಾಲಿಟಿನ್ ಹೊಡೆದು ಪ್ರತಿಭಟನೆ

05chn5
Published on

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಖಾಲಿ ಟಿನ್‌ಗಳನ್ನು ಬಡಿಯುವ ಮೂಲಕ ವಿನೂತನವಾಗಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ಶ್ರೀ ಭುವನೇಶ್ವರಿ ವೃತ್ತದಲ್ಲಿ ಸಂಚಾರ ತಡೆದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಲಿಟಿನ್‌ಗಳನ್ನು ಬಡಿದು ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸ್‌ಗೌಡ ಮಾತನಾಡಿ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಜಿಲ್ಲೆಯಲ್ಲಿ ನಿರಂತರವಾಗಿ ಪ್ರತಿಭಟನೆ ಮಾಡಿಕೊಂಡು ಬರಲಾಗುತ್ತಿದೆ. ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ, ಕೇಂದ್ರ ಮಂತ್ರಿಗಳು ಹಾಗೂ ಸಂಸತ್ ಸದಸ್ಯರು ಖಾಲಿಟಿನ್‌ಗಳಿದ್ದಂತೆ ಎಂದು ಖಾಲಿ ಡಬ್ಬವನ್ನು ಹೊಡೆಯುವ ಮೂಲಕ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಇದೇ ಸ್ಥಿತಿ ಮುಂದುವರಿದರೆ ರಾಜ್ಯದ ಜಲಾಶಯಗಳು ಬತ್ತಿ ಹೋಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರಿಗೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುತ್ತದೆ. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ಮತ್ತು ಕಬಿನಿ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ, ಪಣ್ಯದಹುಂಡಿ ರಾಜು, ಮಹೇಶ್ ಗೌಡ, ನಿಜಧ್ವನಿಗೋವಿಂದರಾಜು, ರವಿಚಂದ್ರಪ್ರಸಾದ್ ಕಹಳೆ, ಲಿಂಗರಾಜು, ಚಾ.ಸಿ.ಸಿದ್ದರಾಜು, ವೀರಭದ್ರ, ತಾಂಡವಮೂರ್ತಿ, ಆಟೋ ನಾಗೇಶ್, ಶಿವು, ಚಾ.ಹ.ರಾಮು, ಗು.ಪುರುಷೋತ್ತಮ್, ಸೋಮವಾರಪೇಟೆ ಮಂಜು, ಕೆ.ಎಂ.ನಾಗರಾಜು, ಮುತ್ತುರಾಜು, ನಾಗರಾಜು ಮೂರ್ತಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net