

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತುಂಡುಗುತ್ತಿಗೆ ಕಾಮಗಾರಿಗಳನ್ನು ನೀಡಲು ಹೆಚ್ಚು ಕಮೀಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರ ಸಿ.ಕೆ.ಮಂಜುನಾಥ್ ಆರೋಪಿಸಿದರು.
ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಚೇರಿಯ ಆವರಣದಲ್ಲಿ ಸಮಾನ ಮನಸ್ಕರ ಗುತ್ತಿಗೆದಾರರ ಹಿತರಕ್ಷಣಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ಗುತ್ತಿಗೆದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಾಲಿನಲ್ಲಿ ತುಂಡು ಗುತ್ತಿಗೆ ಕಾಮಗಾರಿಗಳು ಜಿಲ್ಲಾ ಪಂಚಾಯಿತಿಯಿಂದ ಕ್ರಿಯಾಯೋಜನೆ ಆಗಿದ್ದು, ಇದನ್ನು ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಅಭಿಯಂತರರು ಶೇ.10-15 ರಷ್ಟು ಕಮೀಷನ್ ಕೇಳುತ್ತಿದ್ದಾರೆ. ಸಮಾನವಾಗಿ ಸಿನಿಯಾರಿಟಿ ಪ್ರಕಾರ ಕಾಮಗಾರಿಗಳನ್ನು ಹಂಚಿಕೆಮಾಡದೇ ಗುತ್ತಿಗೆದಾರರಿಗೆ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದ್ದಾರೆ ಎಂದು ದೂರಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರರು ತಮಗೆ ಬೇಕಾದವರಿಗೆ ತುಂಡುಗುತ್ತಿಗೆ ಕಾಮಗಾರಿಗಳನ್ನು ನೀಡುತ್ತಿದ್ದಾರೆ. ಕಾರ್ಯಪಾಲ ಅಭಿಯಂತರರಾದ ನಟರಾಜ್ ಪರೋಕ್ಷವಾಗಿ ತಾವೇ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ. ಅವರ ಡ್ರೈವರ್ ಮೂಲಕ ಅನೇಕ ಕಾಮಗಾರಿಗಳನ್ನು ತಾವೇ ಮಾಡಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗುತ್ತಿಗೆದಾರರ ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನು ವಿರೋಧಿಸಿ ಅ.9 ರಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗುತ್ತಿಗೆದಾರರಾದ ಕಾವುದವಾಡಿ ಗುರು, ಮಲ್ಲಯ್ಯನಪುರ ಸೋಮಸುಂದರ್, ಸಿದ್ದಯ್ಯನಪುರ ಹೇಮಂತ್, ಪಿ.ಎಂ.ಮಹದೇವಸ್ವಾಮಿ, ಡೊಳ್ಳಿಪುರ ಮಂಜುನಾಥ್, ಹೊಂಗನೂರು ನಟರಾಜ್ ಹಾಗೂ ಇತರರು ಭಾಗವಹಿಸಿದ್ದರು.