ಮಹನೀಯರ ಹಾದಿಯಲ್ಲಿ ಸಾಗೋಣ

02chn3
Published on

ಚಾಮರಾಜನಗರ: ಸ್ವಯಂ ಪ್ರೇರಿತ ರಕ್ತದಾನಕ್ಕೆ ನೂಕುನೂಗ್ಗಲು. ಆರೋಗ್ಯ ತಪಾಸಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹರಿದುಬಂದ ಸಾರ್ವಜನಿಕರು. ರೋಗಿಗಳಿಗೆ ಹಣ್ಣು, ವಿದ್ಯಾರ್ಥಿಗಳಿಗೆ ಸಮವಸ ವಿತರಣೆ ಮಹನೀಯರ ಜಯಂತಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ವಿವಿಧ ಸಂಘ-ಸಂಸ್ಥೆಗಳು, ಭಕ್ತವೃಂದ ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108ನೇ ಜಯಂತಿ ಮಹೋತ್ಸವ, ಗಾಂಧಿ ಜಯಂತಿ ಮತ್ತು ಲಾಲ್‌ಬಹದ್ದೂರ್ ಶಾಸಿ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಾಗೂ ವಿವಿಧ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.

ರಕ್ತದಾನ ಶಿಬಿರವನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಾಕಷ್ಟು ರಾಜರು ಈ ದೇಶವನ್ನು ಆಳ್ವಿಕೆ ಮಾಡಿದ್ದಾರೆ. ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸಿ ಹಾಗೂ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಅಂತಹ ಮಹನೀಯರನ್ನು ಈ ದೇಶ ಕೊಡುಗೆಯಾಗಿ ನೀಡಿದೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸವಾಗಬೇಕು ಎಂದರು.

ದೇಶದಲ್ಲಿರುವ ಬಡತನ, ದಾರಿದ್ರ್ಯ, ಹಿಂಸೆ ಹಾಗೂ ಅಸ್ಪಋಸ್ಯತೆಯ ವಿರುದ್ಧ ಗಾಂಧೀಜಿ ಹೋರಾಟ ನಡೆಸಿದರೆ. ಲಾಲ್‌ಬಹದ್ದೂರ್ ಶಾಸಿಯವರು ದೇಶದಲ್ಲಿ ಹಸಿರು ಕ್ರಾಂತಿಯನ್ನು ಹುಟ್ಟುಹಾಕುವ ಮೂಲಕ ಆಹಾರ ಭದ್ರತೆಗೆ ಒತ್ತು ನೀಡಿದರು. ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಶಿಕ್ಷಣ, ಆರೋಗ್ಯ ಮತ್ತು ದಾಸೋಹದಲ್ಲಿ ಕ್ರಾಂತಿ ಉಂಟುಮಾಡಿದರು. ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರಂ ಮಾತನಾಡಿ, ಆರೋಗ್ಯವಂತ ಮನಷ್ಯ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ಬೇರೆ ವಸ್ತುಗಳನ್ನು ಉತ್ಪತ್ತಿ ಮಾಡುವಂತೆ ರಕ್ತವನ್ನು ತಯಾರು ಮಾಡಲು ಆಗುವುದಿಲ್ಲ. ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವವನ್ನು ಉಳಿಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್, ರೇಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಮಹೇಶ್, ರಾಜ್ಯ ಸಮಿತಿ ಸದಸ್ಯೆ ಡಾ.ಸಿ.ಎನ್.ರೇಣುಕಾದೇವಿ, ಜೆಎಸ್‌ಎಸ್ ಆಸ್ಪತ್ರೆಯ ಅಧೀಕ್ಷಕ ಗೋವಿಂದ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಡಿಸಿ, ಎಸ್ಪಿ ಅವರಿಂದ ರಕ್ತದಾನ:
ಗಾಂಧೀಜಿ, ಮತ್ತು ಲಾಲ್‌ಬಹದ್ದೂರ್ ಶಾಸಿ ಜಯಂತಿ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಸ್ವತಃ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಸಾಕಷ್ಟು ವಿದ್ಯಾರ್ಥಿಗಳು, ಮಹಿಳೆಯರು, ಸಾರ್ವಜನಿಕರನ್ನು ಒಳಗೊಂಡಂತೆ 117 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಸ್ವಚ್ಛತಾ ಶ್ರಮದಾನದ ಅಂಗವಾಗಿ ಕಾಲೇಜಿನ ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ವಚ್ಛತಾ ಕಟ್ ವಿತರಣೆ ಮಾಡಲಾಯಿತು.

ವಿವಿಧ ಆರೋಗ್ಯ ತಪಾಸಣೆ:
ಡಾ.ರಾಜೇಂದ್ರ ಮಹಾಸ್ವಾಮಿಗಳ 108 ನೇ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ 1500 ಕ್ಕಿಂತಲೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕ್ಯಾನ್ಸರ್, ನೇತ್ರ ತಪಾಸಣೆ, ಅಂಗಾಂಗ ಮತ್ತು ದೇಹದಾನಗಳ ಬಗ್ಗೆ ಹರಿವು ಹಾಗೂ ನೋಂದಣಿ ನಡೆಯಿತು. ಶಾಲಾ ವಿದ್ಯಾರ್ಥಿಗಳಿಗೆ ಸಮವಸ ಹಾಗೂ ಶೂ ವಿತರಣೆ ಮಾಡಿ, ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net