ಸಂಸ್ಕೃತಿ ಉಳಿವಿಗೆ ಸುತ್ತೂರು ಮಠದ ಸೇವೆ ಅಪಾರ

03chn1
Published on

ಚಾಮರಾಜನಗರ: ಮಹಿಳೆಯರಿಗೆ ಶಿಕ್ಷಣ ನಿರಾಕರಿಸಿದ್ದ ಕಾಲದಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದರು ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ವಿವಿಧ ಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 108 ನೇ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಸಾಕಷ್ಟು ವರ್ಷಗಳ ಹಿಂದೆ ಹೆಣ್ಣು ಮಕ್ಕಳಿಗೆ ವಿಧ್ಯಭ್ಯಾಸವನ್ನು ನಿರಾಕರಿಸಲಾಗಿತ್ತು. ಇಂದಿಗೂ ಸಾಕಷ್ಟು ಪಾಲಕರು ಹಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಿಂದೇಟು ಹಾಕುತ್ತಾರೆ. ಆದರೆ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶಾಲಾ, ಕಾಲೇಜು ಹಾಗೂ ವಸತಿನಿಲಯಗಳನ್ನು ತೆರೆಯುವ ಮೂಲಕ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ಸರ್ಕಾರ ಮಾಡಬೇಕಾದ ಕೆಲಸವನ್ನು ತಾವು ಮಾಡಿ ತೋರಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ.ರಾಜೇಂದ್ರ ಶ್ರೀಗಳು ಅಡಿಗಲ್ಲು ಇಟ್ಟ ಜೆಎಸ್‌ಎಸ್ ಸಂಸ್ಥೆಗಳು ಇಂದು ಶಿಕ್ಷಣ, ಆರೋಗ್ಯ ಮತ್ತು ಇನ್ನಿತರೆ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ. ನಮ್ಮ ಭಾರತೀಯ ಸಂಸ್ಕೃತಿ, ಆಚಾರ, ವಿಚಾರವನ್ನು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೂಲಕ ದೇಶದ ಸಂಸ್ಕೃತಿ, ಪರಂಪರೆ ಉಳಿವಿಗೆ ಜೆಎಸ್‌ಎಸ್ ಅಪಾರವಾದ ಕೊಡುಗೆ ನೀಡಿದೆ. ಈ ನಿಟ್ಟನಲ್ಲಿ ನಾವೆಲ್ಲರೂ ಯೋಚಿಸಿ ಧರ್ಮದ ಆಧಾರದಲ್ಲಿ ದೇಶವನ್ನು ಕಟ್ಟಬೇಕಿದೆ. ವೈಚಾರಿಕ ದೃಷ್ಠಿಯನ್ನು ಮೈಗೂಡಿಸಿಕೊಂಡು ಸಾಗಬೇಕಿದೆ ಎಂದು ತಿಳಿಸಿದರು.

ಪಶುಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಡಾ.ರಾಜೇಂದ್ರ ಶ್ರೀಗಳು ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಸುಧಾರಣೆ ಮಾಡಿದರು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆಯುವ ಮೂಲಕ ರಾಜೇಂದ್ರ ಶ್ರೀಗಳ ಆಶಯವನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಈಡೇರಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್‌ಪ್ರಸಾದ್, ಮಾಜಿ ಶಾಸಕ ಎನ್.ಮಹೇಶ್, ಎಸ್.ಬಾಲರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ. ಪಿ.ಮರಿಸ್ವಾಮಿ, ಬಿ.ಕೆ.ರವಿಕುಮಾರ್, ಆರ್.ಎಂ.ಸ್ವಾಮಿ ಉಪಸ್ಥಿತರಿದ್ದರು.

ಸೇವಾಕಾರ್ಯಗಳೇ ಶ್ರೀಗಳ ಶಕ್ತಿ:
ಡಾ.ರಾಜೇಂದ್ರ ಮಹಾಸ್ವಾಮಿಗಳು ನಿರಂತರವಾಗಿ ಸಮಾಜಕ್ಕೆ ಸಲ್ಲಿಸಿದ ಸೇವೆಗಳೇ ಅವರ ಶಕ್ತಯಾಗಿದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದರು. ವಿವಿಧ ಶೈಕ್ಷಣಿಕ ಸಂಸ್ಥೆಗಳು, ಕಲಾಮಂಟಪ, ಸಂಗೀತ ಸಭೆ, ಶರಣ ಪರಿಷತ್, ಧಾರ್ಮಿಕದತ್ತಿ, ಕೃಷಿ ವಿಜ್ಞಾನ ಕೇಂದ್ರ, ವಿವಿಧ ತರಬೇತಿ ಸಂಸ್ಥೆ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶ್ರೀಗಳ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಎಲ್ಲಿ ಬಸ್ ಸಂಚಾರ ಇಲ್ಲವೋ ಅಂತಹ ಗ್ರಾಮಗಳಲ್ಲಿ ಶಾಲಾ ಕಾಲೇಜು ಸ್ಥಾಪನೆ ಮಾಡುವ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಿದರು ಎಂದರು.

ಡಾ.ರಾಜೇಂದ್ರಸ್ವಾಮಿ ಮಾತೃ ಹೃದಯಿ:
ಸುತ್ತೂರು ಪರಂಪರೆಯ ಡಾ.ರಾಜೇಂದ್ರ ಮಹಾಸ್ವಾಮಿಗಳು ವಿಶಾಲ ಮನೋಭಾವನೆ ಹಾಗೂ ಮಾತೃ ಹೃದಯಿಯಾಗಿದ್ದರು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು. ಡಾ.ರಾಜೇಂದ್ರ ಮಹಾಸ್ವಾಮಿ ಸುತ್ತೂರು ಮಠಕ್ಕೆ ವಿಶ್ವ ಮಾನ್ಯತೆಯನ್ನು ತಂದುಕೊಟ್ಟವರು. ಜ್ಞಾನದ ಬೀಜವನ್ನು ಸಮಾಜದಲ್ಲಿ ಭಿತ್ತಿ, ಅನಾಥ ಮಕ್ಕಳ ಪಾಲಿಗೆ ಆಸರೆಯಾಗಿದ್ದರು. ಶರಣ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವ ಸಲುವಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘ-ಸಂಸ್ಥೆಗಳನ್ನು ಪ್ರಾರಂಭ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನದ ಮಾರ್ಗವನ್ನು ತೋರಿದರು ಎಂದರು.

ಭವ್ಯವಾದ ಮೆರವಣಿಗೆ:
ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 108 ನೇ ಜಯಂತೋತ್ಸವದ ಅಂಗವಾಗಿ ಶ್ರೀಗಳ ಭಾವಚಿತ್ರ ಮೆರವಣಿಗೆ ಬಹಳ ವಿಜೃಂಭಣೆಯಿಂದ ನಡೆಯಿತು. ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆರಂಭವಾದ ಮೆರವಣಿಗೆಗೆ ಶ್ರೀ ಸರ್ಪಭೂಷಣಸ್ವಾಮೀಜಿ, ಶ್ರೀಇಮ್ಮಡಿ ಮುರುಘರಾಜೇದ್ರಸ್ವಾಮಿ ಹಾಗೂ ಶ್ರೀಚನ್ನಬಸವಸ್ವಾಮಿ ಚಾಲನೆ ನೀಡಿದರು. ಬಿ.ರಾಚಯ್ಯ ಜೋಡಿ ರಸ್ತೆ, ಶ್ರೀ ಭುವನೇಶ್ವರಿ ವೃತ್ತ, ಶ್ರೀ ಚಾಮರಾಜೇಶ್ವರ ದೇವಸ್ಥಾನ ಮಾರ್ಗವಾಗಿ ಸಾಗಿದ ಮೆರವಣಿಗೆ ಮತ್ತೆ ಜೆಎಸ್‌ಎಸ್ ಕಾಲೇಜು ತಲುಪಿತು. ಮೆರವಣಿಗೆಯಲ್ಲಿ ನಂದಿಧ್ವಜ, ವೀರಗಾಸೆ, ಗೊರವರ ಕುಣಿತ ಹಾಗೂ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಜೆಎಸ್‌ಎಸ್ ವಿದ್ಯಾರ್ಥಿಗಳು ಮೆರವಣಿಗೆಗೆ ಮೆರುಗು ತುಂಬಿದರು.

ದೇಶದ ಭೂಪಟದಲ್ಲಿ ಜೆಎಸ್‌ಎಸ್ ಸಂಸ್ಥೆಯ ಸಮಾಜಿಕ ಕಾರ್ಯಗಳು ಎದ್ದು ಕಾಣುತ್ತದೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಸರ್ಕಾರಗಳು ಇಂದಿಗೂ ಬೊಬ್ಬೆ ಕಾಕುತ್ತಿರುವ ಸಂದರ್ಭದಲ್ಲಿ ರಾಜೇಂದ್ರ ಶ್ರೀಗಳ ಶಿಕ್ಷಣ ಕ್ರಾಂತಿ ಎಲ್ಲರಿಗೂ ಪ್ರೇರಣೆಯಾಗಬೇಕು.-ವಿ.ಶ್ರೀನಿವಾಸ್ ಪ್ರಸಾದ್, ಸಂಸದ, ಚಾಮರಾಜನಗರ. ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಸುತ್ತೂರು ಮಠದ ಕೊಡುಗೆ ಅಚ್ಚಳಿಯದೇ ಉಳಿದಿದೆ. ಎಲ್ಲರ ಒಳಿತನ್ನು ಬಯಸಿದ ಡಾ.ರಾಜೇಂದ್ರ ಶ್ರೀಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಕಾರಿ ನಡೆ ಸರ್ಕಾರಿ ಯೋಜನೆಗಳಿಗೆ ಪ್ರೇರಕವಾಗಿದೆ.-ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net