ಅಧಿಕಾರಿಗಳಿಗೆ ಶೈಕ್ಷಣಿಕ ಅಧ್ಯಯನ ಪ್ರವಾಸ ಕಾರ್ಯಕ್ರಮ

01chn11
Published on

ಚಾಮರಾಜನಗರ: ಹನೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರುಗಳು, ಹಾಗೂ ನೀರುಗಂಟಿಗಳಿಗೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಶುದ್ಧೀಕರಣ ಯೋಜನಾ ಘಟಕಕ್ಕೆ ಒಂದು ದಿನದ ಶೈಕ್ಷಣಿಕ ಅಧ್ಯಯನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕೈಂಡ್‌ಹಾರ್ಟ್ಸ್ ಸಂಸ್ಥೆಯ ಸಹಯೋಗದಲ್ಲಿ ಶೈಕ್ಷಣಿಕ ಅಧ್ಯಯನ ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ತಾಲೂಕಿನ ಸಹಾಯಕ ಕಾರ್ಯಪಾಲಕ ಅಭಿಯಂತರ ಆನಂದಮೂರ್ತಿ ಮಾತನಾಡಿ, ಏಪ್ರಿಲ್ 2024ರೊಳಗೆ ಹನೂರು ತಾಲೂಕಿನಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳ್ಳಲಿದೆ. ಒಟ್ಟು 291 ಹಳ್ಳಿಗಳಿಗೆ ಸುಸ್ಥಿರ ನದಿಮೂಲದಿಂದ ಪಂಪ್ ಮಾಡಿ ನಂತರ ಪಾಳ್ಯ ಬಹುಗ್ರಾಮ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಶುದ್ದೀಕರಿಸಿ ಈಗಾಗಲೇ 91 ಹಳ್ಳಿಗಳಿಗೆ ಶುದ್ಧ ಮತ್ತು ಸುರಕ್ಷಿತವಾದ ನೀರನ್ನು ಒದಗಿಸಲಾಗುತ್ತಿದೆ. ಎರಡನೇ ಹಂತದ ಕಾಮಗಾರಿಯಲ್ಲಿ 450 ಕಿ.ಮೀ ಪೈಪ್‌ಲೈನ್‌ನಲ್ಲಿ ಈಗಾಗಲೇ 150 ಕಿ.ಮೀ ಗುರಿ ಸಾಧಿಸಲಾಗಿದೆ. ಬಾಕಿ ಉಳಿದಿರುವ ಕಾಮಗಾರಿಯನ್ನು 2024ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದರು.

ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಆಶಾ ರಮೇಶ್ ಮಾತನಾಡಿ, ಜಲಜೀವನ್ ಮಿಷನ್ ಕಾಮಗಾರಿ ಗುಣಮಟ್ಟದಿಂದ ಕೂಡಿದ್ದು, ಹೆಚ್.ಡಿ.ಪಿ.ಇ ಪೈಪ್‌ಗಳನ್ನು ಬಳಸಲಾಗುತ್ತಿದೆ ಇದರ ಗುಣಮಟ್ಟವೂ ಸಹ 30ರಿಂದ 40ವರ್ಷಗಳ ಕಾಲ ಸುದೀರ್ಘ ಬಾಳಿಕೆ ಬರಲಿದೆ. ಯೋಜನೆಯಿಂದ ಗ್ರಾಮಗಳಲ್ಲಿ ಅಕ್ರಮ ನಳ ಸಂಪರ್ಕಗಳಿಗೆ ಕಡಿವಾಣ ಬಿಳಲಿದೆ. ಗ್ರಾಮದ ಎಲ್ಲಾ ಮನೆಗಳಿಗೂ ಮೀಟರ್ ಅಳವಡಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆಯೋ ಅಥವಾ ಇಲ್ಲವೋ ಎಂದು ಖಾತರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸ್ವಚ್ಛ ಭಾರತ್ ಮಿಷನ್ ಯೋಜನೆಯ ಮಾಹಿತಿ, ಶಿಕ್ಷಣ ಹಾಗೂ ಸಂವಹನ ವಿಭಾಗದ ಜಿಲ್ಲಾ ಸಮಾಲೋಚಕ ಪ್ರಭುಸ್ವಾಮಿ, ಹಿರಿಯ ನೀರಿನ ಗುಣಮಟ್ಟದ ಪರೀಕ್ಷಾ ತಜ್ಞ ಉಮಾಪತಿ
ಕಿರಿಯ ಸಹಾಯಕ ಇಂಜಿನಿಯರ್ ಪೂರ್ಣಿಮಾ, ಪಾಳ್ಯ ಬಹುಗ್ರಾಮ ಕುಡಿಯುವ ನೀರಿನ ಘಟಕದ ವ್ಯವಸ್ಥಾಪಕ ಶಾಂತಕುಮಾರ್, ಅನುಷ್ಠಾನ ಬೆಂಬಲ ಸಂಸ್ಥೆಯ ತಂಡದ ಸಿಬ್ಬಂದಿ, ಹನೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನೀರುಗಂಟಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net