

ಚಾಮರಾಜನಗರ: ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ತಿಳಿಸಿದರು.
ನಗರದ ಜನನಮಂಟಪದ ಬಳಿ ಸ್ವಚ್ಛತೆಯೇ ಸೇವೆ, ತ್ಯಾಜ್ಯ ಮುಕ್ತ ಭಾರತ, ಏಕ್ ತಾರೀಕ್, ಏಕ್ ಘಂಟಾ, ಏಕ್ ದಿವಾಸ್ ಅಂಗವಾಗಿ ನಗರದ ವಿವಿಧೆಡೆ ಭಾನುವಾರ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯಕರ ದೇಶವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಸ್ವಚ್ಛ ಹಿ ಸೇವಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಆಯೋಜಿಸಿರುವ ಈ ಕಾರ್ಯಕ್ರಮದ ಮೂಲಕ ಜನರ ಸಹಭಾಗತ್ವದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸ್ವಚ್ಛತೆಯನ್ನು ತರುವ ಕೆಲಸ ಮಾಡಲಾಗುತ್ತಿದೆ. ಸಮಾಜದ ಎಲ್ಲಾ ವರ್ಗದ ಜನರು ಒಂದು ಗಂಟೆಗಳ ಕಾಲ ಶ್ರಮದಾನ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಗೊಳಿಸಬೇಕಿದೆ ಎಂದು ಮನವಿ ಮಾಡಿದರು.
ದೇಶದ ಹಲವು ಗಣ್ಯರು ಹಾಗೂ ಸೆಲೆಬ್ರಿಟಿಗಳು ಈ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಕೈ ಜೋಡಿಸಿದ್ದು. ಈ ಮೂಲಕ ಉತ್ತಮ ಆರೋಗ್ಯಕರ ಪರಿಸರವನ್ನು ನಿರ್ಮಾಣ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಆದಷ್ಟು ಸ್ವಚ್ಛವಾಗಿ ಇಟ್ಟುಕೊಂಡರೆ ಉತ್ತಮ ಆರೋಗ್ಯವೂ ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಚಿನ್ನಮ್ಮ, ಪರಿಸರ ಅಭಿಯಂತರ ಗಿರಿಜಾ, ಮಂಜುನಾಥ್ ಆರಾಧ್ಯ, ಪರಿಸರ ಪ್ರೇಮಿ ವೆಂಕಟೇಶ್ ಹಾಗೂ ಇತರರು ಭಾಗವಹಿಸಿದ್ದರು.