ರಾಜ್ಯದಲ್ಲಿ ಅನ್ಯಾಯಕಾರಿ ಸರ್ಕಾರದಿಂದ ಆಡಳಿತ

28raju1
Published on

ಚಾಮರಾಜನಗರ: ಕೆಆರ್‌ಎಸ್ ಮತ್ತು ಕಬಿನಿ ಜಲಾಶಗಳಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಧರಣಿ ಕುಳಿತ ಬಿಜೆಪಿ ಕಾರ್ಯಕರ್ತರು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಈಬಾರಿ ರಾಜ್ಯದಲ್ಲಿ ಶೇ.60 ರಷ್ಟು ಮಳೆಯಾಗಿಲ್ಲ, ಜಲಾಶಯಗಳು ಭರ್ತಿಯಾಗಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗುವ ಸಾಧ್ಯತೆ ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನರ ಹಿತಕಾಯಬೇಕಾದ ಕಾಂಗ್ರೆಸ್ ಸರ್ಕಾರ, ಕಾವೇರಿ ನದಿ ನೀರು ಪ್ರಾಧಿಕಾರ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂಬುದನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮರ್ಥನೆ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಅನ್ಯಾಯಕಾರಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂಬುದನ್ನು ತೋರ್ಪಡಿಸುತ್ತಿದೆ ಎಂದು ಕಿಡಿಕಾರಿದರು.

ವರ್ಷಪೂರ್ತಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಅಲ್ಲಿ ಮಳೆನೀರಿಗೆ ಕೊರತೆ ಎದುರಾಗುವುದಿಲ್ಲ. ವರ್ಷದಲ್ಲಿ 3 ಬೆಳೆಯನ್ನು ಬೆಳೆಯುತ್ತಾರೆ. ಮೈಸೂರು, ಮಂಡ್ಯಭಾಗದಲ್ಲಿ 2 ಬೆಳೆ ಬೆಳೆಯುವುದಕ್ಕೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಜ್ಯದಲ್ಲಿ ಬರದಛಾಯೆ ಆವರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 123 ವರ್ಷಗಳಲ್ಲಿ ಈ ಬಾರಿ ಕಡಿಮೆ ಮಳೆಯಾಗಿದೆ ಎಂದಿದ್ದಾರೆ. ಕೃಷಿ ಸಚಿವರು ಈಬಾರಿ ಶೇ 50-60 ರಷ್ಟು ರೈತರ ಬೆಳೆ ಒಣಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಒಂದು ಹನಿ ನೀರುಕೂಡ ಬಿಡಬಾರದು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ, ಕೃಷಿ ಸಚಿವಾಲಯ ಮತ್ತು ರಾಜ್ಯ ಪ್ರತಿನಿಧಿಗಳು ರಾಜ್ಯದ ಪರವಾಗಿ ವಾದಮಾಡಿದ್ದಾರೆ. ಕಾವೇರಿ ನದಿನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೊರ್ಟ್ ಆಕಾಶದಿಂದ ಬಂದಿದೆಯೇ. ಅವುಗಳ ಆದೇಶವನ್ನು ದಿಕ್ಕರಿಸಿ ರಾಜ್ಯದ ಹಿತವನ್ನು ಕಾಯದೇ, ಇಂಡಿಯಾ ಒಕ್ಕೂಟದಲ್ಲಿರುವ ಡಿಎಂಕೆ ಪಕ್ಷವನ್ನು ತೃಪ್ತಿಪಡಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ರೈತರ ಹಿತಾಶಕ್ತಿಯನ್ನು ಬಲಿಕೊಡುತ್ತಿದೆ. ಇದನ್ನು ಖಂಡಿಸಿ ರಾಜ್ಯದ ರೈತ ಮತ್ತು ಕನ್ನಡಪರ ಸಂಘಟನೆಗಳು ಕರೆದಿರುವ ಶುಕ್ರವಾರದ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಸ್.ಬಾಲರಾಜ್, ಕೇಂದ್ರಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್, ಉಪಧ್ಯಕ್ಷ ಪಿ.ವೃಷಭೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಬಾಲರಾಜ್, ಡಾ.ಎ.ಆರ್.ಬಾಬು, ನಗರಸಭಾ ಮಾಜಿ ಅಧ್ಯಕ್ಷೆ ಆಶಾನಟರಾಜ್, ಸದಸ್ಯರಾದ ಕುಮುದಾಕೇಶವಮೂರ್ತಿ, ಮಮತಾ, ಶಿವರಾಜ್, ಮುಖಂಡ ಅರಕಲವಾಡಿ ನಾಗೇಂದ್ರ, ನೂರೊಂದುಶೆಟ್ಟಿ, ಕುಲಗಾಣ ಶಾಂತಮೂರ್ತಿ ಹಾಗೂ ಇತರರು ಭಾಗವಹಿಸಿದ್ದರು.

ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ರೈತರು ಮತ್ತು ಸಾರ್ವಜನಿಕರ ಹಿತಕಾಯುವುದಕ್ಕಿಂತಲೂ ಮುಖ್ಯವಾಗಿ, ಇಂಡಿಯಾ ಒಕ್ಕೂಟದ ಪಾಲುದಾರರಾಗಿರುವ ಡಿಎಂಕೆ ಹಿತವೇ ಬಹುಮುಖ್ಯವಾಗಿದೆ. ಈ ಕಾರಣಕ್ಕೆ ಕಾವೇರಿ ಮತ್ತು ಕಬಿನಿ ನೀರನ್ನು ತಮಿಳುನಾಡಿಗೆ ಹರಿಸಿ, ನಮ್ಮ ಅನ್ನದಾತರನ್ನು ಬೀದಿಯಲ್ಲಿ ನಿಲ್ಲಿಸಿದೆ.-ಸಿ.ಎಸ್.ನಿರಂಜನ್‌ಕುಮಾರ್, ಮಾಜಿ ಶಾಸಕ, ಗುಂಡ್ಲುಪೇಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net