ರಾಜ್ಯ ಸರ್ಕಾರದ ವಿರುದ್ಧ ಖಾಲಿ ಮಡಕೆ ಚಳವಳಿ

25chn3
Published on

ಚಾಮರಾಜನಗರ : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಮತ್ತು ರೈತ ಸಂಘದ ಕಾರ್ಯಕರ್ತರು ಸೋಮವಾರ ಖಾಲಿ ಮಡಕೆ ಚಳವಳಿ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಯ ಎಸ್‌ಬಿಐ ಸಮೀಪ ಖಾಲಿ ಮಡಕೆಗಳನ್ನು ಪ್ರದರ್ಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ನಡೆಯುತ್ತಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬ್ಯಾಂಕ್ ಮುಂಭಾಗದಲ್ಲೇ ಹೋರಾಟಗಾರರನ್ನು ಪೊಲೀಸರು ತಡೆದರು. ಬಳಿಕ ಕೆಲಕಾಲ ಅಲ್ಲಿಯೇ ರಾಜ್ಯ ಸರ್ಕಾರ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ೋಷಣೆ ಕೂಗಿ, ಖಾಲಿ ಮಡಕೆಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರೈತರು ಬೆಳೆಗಳಿಗೆ ನೀರು ಕೇಳುತ್ತಿಲ್ಲ, ಕುಡಿಯುವ ನೀರನ್ನು ಉಳಿಸಿ ಎಂದು ಹೋರಾಟ ಮಾಡುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಸರ್ಕಾರದ ಮೇಲೆ ಒತ್ತಡ ತಂದು ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ಮತ್ತು ಕಬಿನಿ ನೀರನ್ನು ಕೂಡಲೇ ನಿಲ್ಲಿಸಬೇಕು. ಎಲ್ಲ ಜಲಾಶಯಗಳಲ್ಲಿ ನೀರು ಖಾಲಿಯಾದರೆ ಮುಂದಿನ ದಿನಗಳಲ್ಲಿ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ ಎಂದು ಎಚ್ಚರಿಸಿದರು.

ಸರ್ಕಾರದ ಜನವಿರೋಧಿ, ರೈತ ವಿರೋಧಿ ನಿಲುವುಗಳಿಂದ ಅನ್ನದಾತರು ಬೀದಿಗೆ ಬಿದ್ದಿದ್ದಾರೆ. ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ೋಷಿಸಬೇಕು, ರೈತರ ನಷ್ಟ ಭರಿಸಬೇಕು. ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಮುಕ್ತ ಸಂವಾದ ಏರ್ಪಡಿಸಿ ಎಂದು ಕೇಳಿದರೆ, ಅಧಿಕಾರಿಗಳು ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ರೈತ ಮುಖಂಡ ಹೊನ್ನೂರು ಬಸವಣ್ಣ ಮಾತನಾಡಿ, ರಾಜ್ಯ ಸರ್ಕಾರ ತಮಿಳುನಾಡಿಗೆ ನಿತ್ಯ ಸರಾಗವಾಗಿ ಕಾವೇರಿ ಮತ್ತು ಕಬಿನಿ ಜಲಾಶಗಳಿಂದ ನೀರು ಹರಿಸುತ್ತಿದೆ. ಇದನ್ನು ಖಂಡಿಸಿ ಖಾಲಿ ಮಡಕೆ ಚಳವಳಿಯನ್ನು ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಭೇಟಿಗೆ ಅವಕಾಶ ಕಲ್ಪಿಸಿಕೊಟ್ಟರೆ ಸಮಸ್ಯೆಗಳ ಕುರಿತು ಚರ್ಚಿಸುತ್ತೇವೆ. ಇಲ್ಲದಿದ್ದರೆ ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಹೆಗ್ಗೋಠಾರ ವಿಜಯ್‌ಕುಮಾರ್, ಹಾಲಿನ ನಾಗರಾಜ್, ಪಟೇಲ್ ಶಿವಮೂರ್ತಿ,
ಕುಮಾರ್, ಮಂಜುನಾಥ್, ಶ್ರೀಕಂಠಪ್ಪ, ಮಹೇಶ್, ಸಿದ್ದಪ್ಪ, ಬಸವಣ್ಣ, ಮಹದೇವಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net