

ಚಾಮರಾಜನಗರ : ಕಾವೇರಿ ಮತ್ತು ಕಬಿನಿ ಜಲಾಶಗಳಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆ ವತಿಯಿಂದ ಸೋಮವಾರ ಘಂಟೆ ಬಾರಿಸುವ ಮೂಲಕ ವಿನೂತನ ಚಳವಳಿ ನಡೆಸಲಾಯಿತು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಂಟೆ ಬಾರಿಸುವುದರೊಂದಿಗೆ ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ರೈತ, ಕನ್ನಡಪರ ಸಂಘಟನೆಗಳು ಕಳೆದ 22 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರು, ಜನರ ಸಮಸ್ಯೆ ಕೇಳಿಸಿಕೊಳ್ಳದಿರುವುದರಿಂದ ಯಾವುದೇ ಸರ್ಕಾರಗಳಿಗೂ ಕಿವಿ ಇಲ್ಲ ಎಂಬುದನ್ನು ರಾಜ್ಯಕ್ಕೆ ತೋರ್ಪಡಿಸುವ ಸಲುವಾಗಿ ಘಂಟೆ ಬಾರಿಸಿ ವಿಭಿನ್ನವಾಗಿ ಪ್ರತಿಭಟಿಸಲಾಗುತ್ತದೆ ಎಂದರು.
ರಾಜ್ಯಾದ್ಯಂತ ಕಾವೇರಿ ಹೋರಾಟದ ಸದ್ದು ಹೆಚ್ಚುತ್ತಿದ್ದರೂ ಯಾರೂ ಅದನ್ನು ಕೇಳಿಸಿಕೊಳ್ಳಲು ಸಿದ್ಧ ಇಲ್ಲ. ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಚಾಮರಾಜನಗರ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪಣ್ಯದಹುಂಡಿ ರಾಜು, ಮಹೇಶ್‌ಗೌಡ, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ್, ಮಹದೇವನಾಯಕ, ಚಾ.ರಾ.ಕುಮಾರ್, ಲಿಂಗರಾಜು, ನಾಗ, ಮಹೇಶ್, ಮಹೇಂದ್ರ, ನಂಜುಂಡ, ಆಟೋ ನಾಗೇಶ್, ವೀರಭದ್ರ, ಅರುಣ್‌ಕುಮಾರ್ ಗೌಡ ಇತರರು ಇದ್ದರು.