

ಚಾಮರಾಜನಗರ: ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಹೊರತರಲು ದಸರಾ ಕ್ರೀಡಾಕೂಟ ಅತ್ಯಂತ ಸಹಕಾರಿ ಎಂದು ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷ ಜೋಸೆಫ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಚಾಮರಾಜನಗರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ, ಕಾಲೇಜು ಹಂತದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಕಷ್ಟು ಅವಕಾಶಗಳು ಸಿಗುತ್ತದೆ. ಆದರೆ ಶಿಕ್ಷಣದಿಂದ ವಂಚಿತರಾಗಿರುವ ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ. ದಸರಾ ಕ್ರೀಡಾಕೂಟದ ಮೂಲಕ ಅಂತಹ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಎಂದು ಸಲಹೆ ನೀಡಿದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗ್ರೇಡ್-2 ಅಧ್ಯಕ್ಷ ಚಿಕ್ಕಬಸವಯ್ಯ ಮಾತನಾಡಿ, ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದರ ಜತೆಗೆ, ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಮೋಹನ್‌ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶಿವಸ್ವಾಮಿ, ಕುಮಾರಸ್ವಾಮಿ, ನಾಗಣ್ಣಇತರರು ಇದ್ದರು.