ಬೆಟ್ಟದಲ್ಲಿ ಅಭಿವೃದ್ಧಿಯ ನಿರೀಕ್ಷೆ ಮೂಡಿಸಿದ ಸಿಎಂ ಭೇಟಿ

24chn1
Published on

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ನಿರೀಕ್ಷೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿಯ ವಿಶ್ವಾಸ ಮನೆ ಮಾಡಿದೆ.

ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಸೆ.27ರಂದು ಬೆಟ್ಟದ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂಧರ್ಭದಲ್ಲಿ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಅಥವಾ ಯೋಜನೆ ೋಷಣೆ ಮಾಡಬಹುದು. ಕೊನೆ ಪಕ್ಷ ಪ್ರಾಧಿಕಾರ ದೇಗುಲದ ಪ್ರಗತಿಯೊಂದಿಗೆ ಹಳ್ಳಿಗಳತ್ತಲೂ ದೃಷ್ಟಿ ಬೀರಬೇಕೆಂದು ಹೇಳಬಹುದೆಂದು ಊಹಿಸಲಾಗಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿದ್ದು, ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇವರಿಂದ ಕೋಟ್ಯಾಂತರ ರೂ. ಕಾಣಿಕೆ ಅರ್ಪಣೆಯಾಗುತ್ತದೆ. ಈ ಕಾಣಿಕೆ ದೇಗುಲದ ವ್ಯಾಪ್ತಿಗಷ್ಟೇ ಸೀಮಿತವಾಗಿದ್ದು, ಬೆಟ್ಟದ ಸುತ್ತಮುತ್ತ ಇರುವ ಹಳ್ಳಿಗಳು ಅಭಿವೃದ್ಧಿ ಕಂಡಿಲ್ಲ.

ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 18 ಹಳ್ಳಿಗಳಿವೆ. ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಹಳ್ಳಿಗಳಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಗ್ರಾಮಸ್ಥರಿಗೆ ಸೌಲಭ್ಯಗಳ ಸ್ವಾತಂತ್ರ್ಯ ಸಿಕ್ಕಿಲ್ಲ. ರಸ್ತೆ, ಕುಡಿಯುವ ನೀರು, ವಿದ್ಯುತ್, ಶಾಲೆ, ಸಾರಿಗೆ ಇನ್ನಿತರ ಸೇವೆಗಳು ದೊರೆಯುತ್ತಿಲ್ಲ. ಅರಣ್ಯ ಇಲಾಖೆಯ ಕಾನೂನುಗಳು ಇದಕ್ಕೆಲ್ಲ ಅಡ್ಡಿಯಾಗಿವೆ. ಸಾರಿಗೆ ಸೌಲಭ್ಯವಿಲ್ಲದೆ, ರಸ್ತೆಗಳು ಸರಿ ಇಲ್ಲದೆ ಜನರು ಅನಾರೋಗ್ಯಕ್ಕೀಡಾದರೆ ಡೋಲಿ ಕಟ್ಟಿಕೊಂಡು ಬರುವ ಪರಿಸ್ಥಿತಿ ಇದೆ. ಇಂತಹ ಹತ್ತಾರು ಸಮಸ್ಯೆಗಳ ಸುಳಿಯಲ್ಲೇ ಜೀವಿಸುತ್ತಿರುವ ಜನರಿಗೆ ಯಾವುದೇ ಜನಪ್ರತಿನಿಧಿಗಳು ಬೆಟ್ಟಕ್ಕೆ ಭೇಟಿ ನೀಡಿದರೂ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಾರೆ ಎನ್ನುವ ಆಶಾಭಾವ ಮೂಡುತ್ತದೆ. ಅಂತಿಮವಾಗಿ ಇದರ ಲಿತಾಂಶವನ್ನು ಕಾಣಬೇಕಾದರೆ ಗ್ರಾಮಗಳ ಚಿತ್ರಣವನ್ನು ನೋಡಬೇಕು.

ಬಿಎಸ್‌ವೈ ಭೇಟಿಯಾಗಿದ್ದರು: ಮಲೆ ಮಹದೇಶ್ವರ ಬೆಟ್ಟಕ್ಕೆ 2020ರ ನವೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದಿದ್ದ ಬಿಎಸ್‌ವೈ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ, 110 ಕೋಟಿ ರೂ. ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದೇ ವೇಳೆ ಕೆಲವು ಶಾಲೆಗಳನ್ನು ದತ್ತು ಪಡೆಯುವುದಾಗಿ ಪ್ರಾಧಿಕಾರ ತಿಳಿಸಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ.

ಮಾಹಿತಿ ಕಲೆಹಾಕಿರುವ ಡಿಸಿ:
ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಾಡುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಅಧಿಕಾರಿಗಳ ಮೂಲಕ ಸಿದ್ಧಪಡಿಸಿರುವ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ವರದಿಯ ಪ್ರಕಾರ, ಕೊಂಬುಡಿಕ್ಕಿ ಗ್ರಾಮದಲ್ಲಿ ಒಟ್ಟು 733 ಜನರಿದ್ದಾರೆ. ಬಸ್ ನಿಲ್ದಾಣವಿಲ್ಲ, ಸಾರ್ವಜನಿಕ ಆಸ್ಪತ್ರೆ ಇಲ್ಲ, 7 ಕಿ.ಮೀ ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು, ಪ್ರಾಥಮಿಕ ಶಾಲೆ, ಅಂಗನವಾಡಿ ಇದೆ. ಪ್ರೌಢಶಾಲೆ ಇಲ್ಲದ ಕಾರಣ 12 ಕಿ.ಮೀ ದೂರಕ್ಕೆ ನಡೆದು ಹೋಗಬೇಕು, ವಿದ್ಯಾರ್ಥಿ ನಿಲಯಗಳು ಇಲ್ಲ, ಎಸ್ಸಿ/ಎಸ್ಟಿ ಸಮುದಾಯದವರಿಗೆ ಸ್ಮಶಾನವಿದೆ, ಕುಡಿಯುವ ನೀರಿನ ಸರಬರಾಜಿಗಾಗಿ ಪೈಪ್‌ಲೈನ್ ಅಳವಡಿಸಿಲ್ಲ. ಆಣೆಹೊಲ ಗ್ರಾಮದಲ್ಲಿ 856 ಜನರು ವಾಸವಿದ್ದಾರೆ. 3 ಕಿ.ಮೀ ದೂರದಲ್ಲಿ ಬಸ್ ನಿಲ್ದಾಣವಿದೆ. 3 ಕಿ.ಮೀ ದೂರದಲ್ಲಿ ಆರೋಗ್ಯ ಕೇಂದ್ರವಿದೆ, ಪ್ರಾಥಮಿಕ ಶಾಲೆ ಇದೆ, ಪ್ರೌಢಶಾಲೆ ಇಲ್ಲ. ಎಸ್ಸಿ/ಎಸ್ಟಿ ಸಮುದಾಯಕ್ಕೆ ಸ್ಮಶಾನವಿಲ್ಲ. ನೀರಿನ ವ್ಯವಸ್ಥೆಯ ಪೈಪ್‌ಲೈನ್ ಇದೆ. ಈ ಮಾದರಿಯಲ್ಲಿ ಉಳಿದ ಗ್ರಾಮಗಳ ಮಾಹಿತಿಯನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಕಲೆ ಹಾಕಿದ್ದಾರೆ. ಇಲ್ಲಿನ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಇಲ್ಲದಿರುವ ಕಡೆಗಳಿಗೆ ಮೊಬೈಲ್ ಯೂನಿಟ್‌ಗಳು, ಆರೋಗ್ಯ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಿದ್ದಾರೆ. ಅಲ್ಲದೇ, ಪಿಂಚಣಿ, ಮಾಸಾಶನ ಪಡೆಯುತ್ತಿರುವವರ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಗುಡ್ಡಗಾಡಿನ ಜನರಿಗೆ ಅಗತ್ಯ ಸೇವೆಗಳು ದೊರೆಯುವ ಭರವಸೆ ಮೂಡಿದೆ.

ಮಹದೇಶ್ವರರು ಶ್ರೀಶೈಲದ ಕಡೆಯಿಂದ ಬಂದು ಧ್ಯಾನ ತಪಸ್ಸು ಮಾಡಿ, ಕಾಡು ಜನರಿಗೆ ಅಹಿಂಸಾ ತತ್ವವನ್ನು ಹೇಳಿ ವೃತ್ತಿ ಕಾಯಕ ಕಲಿಸಿ ಮನುಕುಲ ಉದ್ಧರಿಸಿದ ಮಹಾ ತಪೋ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ. ಇಂತಹ ದಡ್ಡ ಕಾನನದಲ್ಲಿ ವಾಸ ಮಾಡುತ್ತಿರುವ ಬೇಡಗಂಪಣ ಸಮುದಾಯದ ಜನರ ಸ್ಥಿತಿ ದುರ್ಗಮವಾಗಿದೆ. ಇಲ್ಲಿನ ಶಿಕ್ಷಣ, ಆರೋಗ್ಯ, ಮೂಲಸೌಕರ್ಯವಂತೂ ಗಗನಕುಸುಮವಾಗಿದೆ. ಶಾಲೆಗೆ ಬರುವ ಮಕ್ಕಳು ವಿದ್ಯುತ್ ಸೌಲಭ್ಯವಿಲ್ಲದೆ ಶಿಕ್ಷಣದಿಂದ ವಂಚಿತರಾಗಿತ್ತಿದ್ದಾರೆ. ಇಲ್ಲಿನ ಜನರ ಪರಿಸ್ಥಿತಿ ನೋಡಿದರೆ ನಾವು ಭಾರತ ದೇಶದಲ್ಲಿ ಇದ್ದೇವೆಯೇ ಎಂದು ಅನಿಸುತ್ತದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಗ್ರಾಮಗಳಿಗೆ ಸೌಲಭ್ಯಗಳಿಲ್ಲ.ಸದ್ಯ ನೂತನ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅಧಿಕಾರವಹಿಸಿಕೊಂಡ ಬಳಿಕ ಇಲ್ಲಿನ ಗ್ರಾಮಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಇವರ ಕಾರ್ಯ ವೈಖರಿ ಶ್ಲಾಘನೀಯ. ಇವರು ಸರ್ಕಾರ ಗಮನ ಸೆಳೆದು ಹಳ್ಳಿಗಳ ಅಭಿವೃದ್ಧಿ ಮಾಡುವ ಭರವಸೆ ಇದೆ.-ವಿದ್ವಾನ್ ಶ್ರೀಶಾಂತಮಲ್ಲಿಕಾರ್ಜುನಸ್ವಾಮೀಜಿ, ಪೀಠಾಧಿಪತಿ, ಸಾಲೂರು ಬೃಹನ್ಮಠ, ಮಲೆ ಮಹದೇಶ್ವರ ಬೆಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net