

ಚಾಮರಾಜನಗರ: ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪುಣಜನೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಮುತ್ತುನಾಯಕ ತಿಳಿಸಿದರು.
ತಾಲೂಕಿನ ಪುಣಜನೂರು ಗ್ರಾಮದಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ತಂದು ವಿವಿಧ ಚಟುವಟಿಕೆಗಳನ್ನು ಪಾರದರ್ಶಕವಾಗಿ ನಡೆಸಲು ಕ್ರಮ ಕೈಗೊಂಡಿದೆ. ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಏಕರೂಪ ಕಾನೂನನ್ನು ಜಾರಿಗೆ ತರಲಾಗಿದ್ದು, ಅದರಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಲಾಗಿದೆ. ಸಂಘದಿಂದ ಮುಂದಿನ ದಿನಗಳಲ್ಲಿ ಅಲ್ಪಾವಧಿ, ದೀರ್ಘಾವಧಿ, ಜೇನು, ಕೋಳಿ,ಹಸು, ಸಾಕಣೆಗೆ ಸಾಲ ನೀಡಲಾಗುತ್ತದೆ. ಇದಲ್ಲದೆ ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ ಸಹ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಇದರ ಸದುಪಯೋಗವನ್ನು ಸದಸ್ಯರು ಪಡೆದುಕೊಳ್ಳಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ 1.41ಸಾವಿರ ರೂ. ಲಾಭ ಬಂದಿದೆ. ರೈತರ ಕೃಷಿ ಚಟುವಟಿಕೆ, ಮಕ್ಕಳ ಶಿಕ್ಷಣಕ್ಕೆ ಸಂಘವು ಹೆಚ್ಚು ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಚಿನ್ನದ ಪದಕ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ವಾರ್ಷಿಕ ಆಯವ್ಯಯವನ್ನು ಸಂಘದ ಸಿಇಒ ಎಸ್.ಜಯಶಂಕರಸ್ವಾಮಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ದೊರೆಸ್ವಾಮಿನಾಯಕ, ನಿರ್ದೇಶಕರಾದ ಪಿ.ಕುಮಾರ್, ಪಿ.ನಾಗನಾಯ್ಕ, ಪಿ.ಗಣೇಶನಾಯಕ, ಎನ್.ಕೃಷ್ಣ, ಗುರುನಾಯಕ, ಪ್ರವೀಣ್ ನಾಯ್ಕ, ಪುಟ್ಟಸ್ವಾಮಿಗೌಡ, ಬೊಮ್ಮಮ್ಮ, ಗಂಗಾ, ಜಯಬಾಯಿ, ನೌಕರರಾದ ಮಾದೇಶ್, ಕೆಂಚ, ಚಂದ್ರುನಾಯಕ, ಚಂದ್ರಶೇಖರ್ ಇತರರು ಭಾಗವಹಿಸಿದ್ದರು.