ಆಟೋ ಚಾಲಕರ ಕೊಡುಗೆ ಅಪಾರ

22chn4
Published on

ಚಾಮರಾಜನಗರ: ನಗರದ ಅಭಿವೃದ್ಧಿಯಲ್ಲಿ ಆಟೋ ಮಾಲೀಕರು-ಚಾಲಕರ ಸೇವೆ ಅಪಾರವಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಸಂಪಿಗೆ ರಸ್ತೆಯ ಗೂಡ್ಸ್ ಆಟೋ ನಿಲ್ದಾಣದಲ್ಲಿ ಶುಕ್ರವಾರ ಶ್ರೀಚಾಮರಾಜೇಶ್ವರ ಗೂಡ್ಸ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು.

ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಚಾಮರಾಜನಗರ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿದ್ದು, ಇದಕ್ಕೆ ಆಟೋ ಚಾಲಕರು, ಮಾಲೀಕರ ಕೊಡುಗೆ ಅಪಾರವಾಗಿದೆ. ನಗರದ ನಾಲ್ಕೈದು ಕಡೆ ಸಂಘ ರಚಿಸಿ, ಆಟೋ ನಿಲ್ದಾಣ ಮಾಡಿಕೊಂಡು ಜನತೆಗೆ ಉತ್ತಮ ಸೇವೆ ನೀಡುವ ಮೂಲಕ ಕನ್ನಡ ನಾಡು, ನುಡಿ, ಜಲ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದು, ರಾಜ್ಯ, ಜಿಲ್ಲೆಯ ಅಭಿವೃದ್ಧಿಯಲ್ಲಿ ನಿಮ್ಮ ಕೊಡುಗೆ ಅಪಾರವಾಗಿದೆ. ನಿಮ್ಮ ಸಂಘವು ಯಶಸ್ವಿಯಾಗಲಿ ಎಂದು ಆಶಿಸಿದರು.

ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಆರ್.ಶ್ರೀಕಾಂತ್ ಮಾತನಾಡಿ, ಆಟೋ ಚಾಲಕರು ಹಾಗೂ ಮಾಲೀಕರು ನಾಡು, ನುಡಿಯ ಸಂಕೇತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಡಿದು ವಾಹನ ಚಲಾಯಿಸಬೇಡಿ, ವಿಮೆ ಸೇರಿದಂತೆ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಚಾಲನೆ ಮಾಡಬೇಕು. ಅತಿವೇಗ, ಅಜಾಗರೂಕತೆಯಿಂದ ಚಾಲನೆ ಮಾಡಬೇಡಿ ಎಂದು ಸಲಹೆ ನೀಡಿದರು.

ನಗರಸಭಾ ಸದಸ್ಯ ಚಂದ್ರಶೇಖರ್, ಸುವರ್ಣ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿದ್ದರಾಜು, ತಾಲೂಕು ಅಧ್ಯಕ್ಷ ಆಟೋ ಶಿವಣ್ಣ, ಕರ್ನಾಟಕ ಮಾನವ ಹಕ್ಕುಗಳ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ್, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಗಣೇಶ್‌ಪ್ರಸಾದ್, ವರ್ತಕರಾದ ಸತೀಶ್, ಲೋಕನಾಥ್, ಮಹೇಶ್, ಆಟೋ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಸಂಘದ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಬಸವಣ್ಣ, ಖಜಾಂಚಿ ನಾಗೇಶ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net