ಸರ್ಕಾರದ ಬೇಜವಾಬ್ದಾರಿತನದಿಂದ ತ.ನಾಡಿಗೆ ನೀರು

Balaraj EX MLA- cong
Published on

ಚಾಮರಾಜನಗರ : ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಸೂಕ್ತ ಮಾಹಿತಿ ಒದಗಿಸದೆ ಬೇಜವಾಬ್ದಾರಿಯಿಂದ ತಮಿಳುನಾಡಿಗೆ ನೀರು ಹರಿಸಿದೆ ಎಂದು ಮಾಜಿ ಶಾಸಕ ಎಸ್.ಬಾಲರಾಜ್ ಆರೋಪ ಮಾಡಿದರು.

ರಾಜ್ಯದಲ್ಲಿ ಈ ಬಾರಿ ಎಲ್ಲೂ ಮಳೆಯಾಗಿಲ್ಲ. ಸಾಕಷ್ಟು ಜಿಲ್ಲೆಗಳಲ್ಲಿ ಬರ ಆವರಿಸಿದೆ. ಜಲಾಶಯಗಳು ಭರ್ತಿಯಾಗದೆ ಕೃಷಿ ಹಾಗೂ ಕುಡಿಯುವ ನೀರಿಗೆ ಅಭಾವ ಉಂಟಾಗುವ ಸಾಧ್ಯತೆ ಇದೆ. ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳದೆ ಹಾಗೂ ರಾಜ್ಯದ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡದೆ ಬೇಜವಾಬ್ದಾರಿಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ ಕೆಆರ್‌ಎಸ್ ಜಲಾಶಯದಲ್ಲಿ 11.18 ಟಿಎಂಸಿ, ಹೇಮಾವತಿಯಲ್ಲಿ 13.36 ಟಿಎಂಸಿ, ಕಬಿನಿಯಲ್ಲಿ 4.84 ಟಿಎಂಸಿ ಹಾಗೂ ಹಾರಂಗಿ ಜಲಾಶಯದಲ್ಲಿ 4.12 ಟಿಎಂಸಿ ನೀರು ಸಂಗ್ರಹವಿದೆ. ಒಟ್ಟಾರೆ ಈ ನಾಲ್ಕೂ ಜಲಾಶಯಗಳಿಂದ 15 ಟಿಎಂಸಿ ನೀರನ್ನು ಅಲ್ಲೇ ಉಳಿಸಬೇಕಾಗಿದೆ. ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಜನರಿಗೆ ಕುಡಿಯಲು 33 ಟಿಎಂಸಿ, ರೈತರು ಬೆಳೆದಿರುವ ಬೆಳೆಗಳಿಗೆ 70 ಟಿಎಂಸಿ, ಕೈಗಾರಿಕೆಗೆ 3 ಟಿಎಂಸಿ ನೀರು ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಮೂರನೇ ಬೆಳೆಗೆ ರಾಜ್ಯ ಸರ್ಕಾರ 11 ಟಿಎಂಸಿ ನೀರನ್ನು ಹರಿಸಿ ರಾಜ್ಯದ ರೈತರಿಗೆ ದ್ರೋಹವೆಸಗಿದೆ. ರಾಜ್ಯದ ಜನರ ಕುಡಿಯುವ ನೀರಿಗೆ ಆದ್ಯತೆ ನೀಡದೆ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು.

ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯದ ರೈತರು ಮತ್ತು ಸಂಘಟನೆಗಳ ಜತೆಗೆ ಚರ್ಚಿಸದೆ ಇಂಡಿಯಾ ಮೈತ್ರಿಕೂಟಕ್ಕೆ ಭಯಬಿದ್ದು ತಮಿಳುನಾಡಿಗೆ ನೀರು ಹರಿಸಲಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಬೆಳೆನಾಶವಾಗಿರುವ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ರೈತರ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಕಮಲಮ್ಮ, ವಕ್ತಾರ ಅಯ್ಯನಪುರ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net