

ಚಾಮರಾಜನಗರ: ಜಿಲ್ಲೆಯಲ್ಲಿ ಬೇರೂರಿರುವ ಕೊರತೆಗಳ ಪಟ್ಟಿ ಸಿದ್ಧಗೊಂಡಿದೆ. ನಮೂನೆಯಲ್ಲಿ ಅವಶ್ಯಕತೆಗಳು ಭರ್ತಿಯಾಗಿದೆ..!
ಗಡಿಜಿಲ್ಲೆ ಚಾಮರಾಜನಗರದ ಕುಂದುಕೊರತೆಗಳನ್ನು ಪಟ್ಟಿಯಲ್ಲಿ ಜಿಲ್ಲಾಡಳಿತ ತಯಾರಿಸಿದೆ. ನೂತನ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ನಿರ್ದೇಶನದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಎಲ್ಲ ಹಳ್ಳಿಗಳಲ್ಲಿ ಇರುವ ಅವಶ್ಯಕತೆಗಳನ್ನು ನಮೂನೆಯಲ್ಲಿ ಭರ್ತಿ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಜನರಿಗೆ ಪ್ರಮುಖವಾಗಿ ಬೇಕಾದ ಆರೋಗ್ಯ, ಶಿಕ್ಷಣ ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ಯಳಂದೂರು ತಾಲೂಕುಗಳ ಹಳ್ಳಿಗಳ ವಿವರವನ್ನು ಸಂಗ್ರಹಿಸಲಾಗಿದೆ. ಗ್ರಾಮಗಳ ಹೆಸರು, ಒಟ್ಟು ಜನಸಂಖ್ಯೆ, ಮನೆಗಳ ಸಂಖ್ಯೆ, ಬಸ್ ನಿಲ್ದಾಣಕ್ಕಿರುವ ದೂರ, ಪ್ರಾಥಮಿಕ/ ಉಪ ಆರೋಗ್ಯ ಕೇಂದ್ರ, ಕೇಂದ್ರ ಇಲ್ಲದಿದ್ದರೆ ಹತ್ತಿರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಎಷ್ಟು ಕಿ.ಮೀ. ಇದೆ ಎನ್ನುವ ಮಾಹಿತಿಯನ್ನು ನಮೂನೆಯಲ್ಲಿ ಭರ್ತಿ ಮಾಡಲಾಗಿದೆ.
ಪ್ರಾಥಮಿಕ ಶಾಲೆ, ಅಂಗನವಾಡಿ ಇಲ್ಲದಿದ್ದರೆ ಹತ್ತಿರದಲ್ಲಿರುವ ಶಾಲೆ, ಅಂಗನವಾಡಿ ಎಷ್ಟು ಕಿಮೀ ದೂರದಲ್ಲಿದೆ, ಪರಿಶಿಷ್ಟ ಪಂಗಡದವರಿಗೆ ಸ್ಮಶಾನ ಭೂಮಿ ಇದೆಯೋ ಅಥವಾ ಇಲ್ಲವೋ, ಗ್ರಾಮಗಳಲ್ಲಿ ನೀರಿನ ಸರಬರಾಜುಗಾಗಿ ಪೈಪ್‌ಲೈನ್ ಇದೆಯೋ ಅಥವಾ ಇಲ್ಲವೋ ಎನ್ನುವ ವಿವರಗಳನ್ನು ಕಲೆ ಹಾಕಲಾಗಿದೆ.
ಕಾಡುತ್ತಿದೆ ಕೊರತೆಗಳು:
ಜಿಲ್ಲೆಯನ್ನು ಕೊರತೆಗಳು ಕಾಡುತ್ತಿದೆ. ಮೂಲಸೌಕರ್ಯಗಳಿಲ್ಲದ ಹಳ್ಳಿಗಳು ಬಹಳಷ್ಟಿವೆ. ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರ ಅರಣ್ಯರೋದನಕ್ಕೆ ಮುಕ್ತಿ ಸಿಕ್ಕಿಲ್ಲ. ಕಾಡಿನ ಒಳಗಿರುವ ಪೋಡುಗಳಲ್ಲಿ ಕಷ್ಟಗಳೇ ಮನೆ ಮಾಡಿವೆ. ಅರಣ್ಯ ಇಲಾಖೆಯ ನಿಯಮಗಳು ಗ್ರಾಮಗಳ ಅಭಿವೃದ್ಧಿಗೆ ಅಡ್ಡಿಯಾಗಿದೆ. ಅರಣ್ಯದಿಂದ ಹೊರಗಿರುವ ಹಳ್ಳಿಗಳ ಅಭಿವೃದ್ಧಿಗೆ ಇಚ್ಛಾಶಕ್ತಿಯ ಕೊರತೆ ತಡೆಯೊಡ್ಡಿದೆ.
ಗ್ರಾಮದಲ್ಲಿ ಶಾಲೆ ಇಲ್ಲದ ಕಾರಣ ಕಿಮೀ ದೂರ ನಡೆದು ಹೋಗುವ ಮಕ್ಕಳು, ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದೆ ಇರುವುದಕ್ಕೆ ತಾಲೂಕು ಕೇಂದ್ರಕ್ಕೆ ಬರುವ ರೋಗಿಗಳು, ಸ್ಮಶಾನವಿಲ್ಲದೆ ಶವ ಸಂಸ್ಕಾರಕ್ಕೆ ಪರದಾಡುವ ಜನರು, ಕುಡಿಯುವ ನೀರು ಸೇರಿದಂತೆ ಇತರ ಸಮಸ್ಯೆಗಳ ಸುಳಿಯಲ್ಲೇ ಇಲ್ಲಿನ ಜನರು ಜೀವಿಸುತ್ತಿದ್ದಾರೆ. ಕನಿಷ್ಠ ಮೂಲಸೌಕರ್ಯಗಳಿಗಾಗಿ ಗ್ರಾಮಸ್ಥರು, ರೈತ ಸಂಘಟನೆಗಳು ಪ್ರತಿಭಟನೆ ಮಾಡುತ್ತಲೇ ಬಂದಿದ್ದರೂ ಸ್ಪಂದನೆ ಸಿಕ್ಕಿರುವುದು ಮಾತ್ರ ವಿರಳ. ಹೀಗಾಗಿ ಜನರ ಹೋರಾಟ ಮುಂದುವರಿದಿದೆ. ಜಿಲ್ಲೆಗೆ ಮುಖ್ಯಮಂತ್ರಿಗಳೋ ಅಥವಾ ಸಚಿವರೋ ಆಗಮಿಸಿದಾಗ ಧರಣಿಗಳು ನಡೆಯುತ್ತವೆ, ಮನವಿಗಳು ಸಲ್ಲಿಕೆಯಾಗುತ್ತವೆ. ಆದರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ. ಕೊನೆ ಪಕ್ಷ ಸಮಸ್ಯೆಗಳೇನು ಎಂದು ಅರಿಯುವ ಪ್ರಯತ್ನಗಳೂ ನಡೆದಿರಲಿಲ್ಲ.
ಚಾಮರಾಜನಗರಕ್ಕೆ ಕೆಲವು ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಸಿ.ಟಿ.ಶಿಲ್ಪಾನಾಗ್‌ಗೆ ಕೊರತೆಗಳ ಪಟ್ಟಿ ಜಿಲ್ಲೆಯ ಚಿತ್ರಣವನ್ನು ತಿಳಿಯಲು, ಜನರ ಅವಶ್ಯಕತೆಗಳನ್ನು ಪೂರೈಸಲು ನೆರವಾಗುತ್ತದೆ. ಅಲ್ಲದೇ ಸೆ.27ರಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಸಂದರ್ಭದಲ್ಲಿ ಜಿಲ್ಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕೇಳಲು ಈ ಪಟ್ಟಿ ಸಹಕಾರಿಯಾಗಲಿದೆ.
ಜಿಲ್ಲಾಡಳಿತ ಏನು ಮಾಡಬಹುದು?
ಗ್ರಾಮಗಳ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಜಿಲ್ಲಾಡಳಿತ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತದೆ. ಗ್ರಾಮೀಣ ಭಾಗದ ಜನರ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕಾದ ಅಗತ್ಯತೆ ಇದ್ದು, ಹಳ್ಳಿಗಳಲ್ಲಿ ಆರೋಗ್ಯ ಕೇಂದ್ರ ಇಲ್ಲದ ಕಡೆಗಳಿಗೆ, ಶಾಲೆಗಳು ದೂರು ಇರುವ ಕಡೆಗಳಲ್ಲಿ ಪರ್ಯಾಯ ಸೌಲಭ್ಯ ಕಲ್ಪಿಸುವ ಕಾರ್ಯ ನಡೆಯಲಿದೆ ಎಂದು ತಿಳಿದುಬಂದಿದೆ.