

ಚಾಮರಾಜನಗರ: ಸಿಮ್ಸ್ ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನಿಂಗ್ ಘಟಕ ಸ್ಥಾಪನೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆಯಲ್ಲಿ (ಸಿಮ್ಸ್) ಶುಕ್ರವಾರ ಸಿ.ಟಿ ಸ್ಕ್ಯಾನಿಂಗ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ನಗರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣವಾದ ನಂತರ ಸಾರ್ವಜನಿಕರು ಚಿಕಿತ್ಸೆಗಾಗಿ ಮೈಸೂರಿಗೆ ತೆರಳುವುದು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಸಿಮ್ಸ್ ಆಸ್ಪತ್ರೆಯಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್ ಘಟಕವನ್ನು ಆರಂಭಿಸಲಾಗುವುದು. ಆಸ್ಪತ್ರೆಗೆ ಹೆಚ್ಚಾಗಿ ಬರುವ ಬಡ ಮತ್ತು ಮಧ್ಯಮ ವರ್ಗದ ಜನರು ಇದರ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಸಿಮ್ಸ್ ಆಸ್ಪತ್ರೆ ಸ್ಥಾಪನೆಗೆ ಅಡಿಗಲ್ಲು ಹಾಕಲಾಗಿತ್ತು. ಈಗ ಆಸ್ಪತ್ರೆಯಲ್ಲಿ ಸಾಕಷ್ಟು ಸೇವೆಗಳು ಲಭ್ಯವಿದೆ. ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಿದ ಸಮಯದಲ್ಲಿ, ಆಸ್ಪತ್ರೆಯನ್ನು ಮತ್ತಷ್ಟು ಉನ್ನತೀಕರಿಸಲು ಹೆಚ್ಚಿನ ಅನುದಾನ ನೀಡುವಂತೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ವೈದ್ಯಕೀಯ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಸಿ.ಟಿ.ಸ್ಕ್ಯಾನಿಂಗ್ ಘಟಕ ಸ್ಥಾಪನೆ ಮಾಡಿರುವುದು ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಿ.ಟಿ ಸ್ಕ್ಯಾನಿಂಗ್ ಘಟಕದಿಂದ ವೈದ್ಯರಿಗೂ ಸಹಕಾರಿಯಾಗಲಿದೆ. ನಾನು ಬಂದಾಗ ಆಸ್ಪತ್ರೆಯ ವ್ಯವಸ್ಥೆ ನೋಡಿ ಬೇಸರವಾಗಿತ್ತು. ಶಾಸಕರು ಮತ್ತು ಇತರರ ಸಹಕಾರದಿಂದ ಸಿಮ್ಸ್ ಆಸ್ಪತ್ರೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೀಲು ಮತ್ತು ಮೂಳೆ ತಜ್ಞ ಡಾ.ಮಾರುತಿ, ಡಾ.ಕೃಷ್ಣಪ್ರಸಾದ್, ಡಾ.ಮಹೇಶ್, ರೇಡಿಯಾಲಜಿಸ್ಟ್ ಎಚ್‌ಓಡಿ ಡಾ.ರೇಖಾ ಹಾಗೂ ಇತರರು ಉಪಸ್ಥಿತರಿದ್ದರು.