ಸಚಿವ ಡಿ.ಸುಧಾಕರ್ ರಾಜೀನಾಮೆ ಪಡೆಯಿರಿ

Moodnaakodu Prakash
Published on

ಚಾಮರಾಜನಗರ: ದಲಿತರ ಮೇಲೆ ಜಾತಿ ನಿಂದನೆ ಮತ್ತು ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು, ಬಂಧನಕ್ಕೆ ಒಳಪಡಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಒತ್ತಾಯಿಸಿದರು.

ಯಲಹಂಕದಲ್ಲಿ ದಲಿತರ ಮನೆಯನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿರುವ ಸಚಿವ ಡಿ.ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರು, ಈ ವರೆಗೂ ಅವರನ್ನು ಬಂಧಿಸಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಹೆಸರಿನಲ್ಲಿ ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ದೌರ್ಜನ್ಯವನ್ನು ಸುಳ್ಳು ಕೇಸ್ ಎಂದು ಹೇಳುವ ಮೂಲಕ ದಲಿತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬರುತ್ತಲೇ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಗೂಂಡಾಗಳು ಮತ್ತು ದಲಿತ ವಿರೋಧಿಗಳೇ ತುಂಬಿಕೊಂಡಿದ್ದಾರೆ. ದಲಿತರ ಮೇಲೆ ಇಂತಹ ದೌರ್ಜನ್ಯ ಪ್ರಕರಣಗಳು ನಡೆದರು, ಗೃಹಸಚಿವ ಜಿ.ಪರಮೇಶ್ವರ್ ಕಣ್ಣುಮುಚ್ಚಿ ಕುಳಿತಿದ್ದಾರೆ. ದಲಿತರ ಪ್ರಕರಣಗಳನ್ನು ರಾಜಿ ಸಂಧಾನ ಮಾಡುವುದಕ್ಕೆ ಇವರಿಗೆ ಗೃಹ ಖಾತೆ ಕೊಟ್ಟಿದ್ದಾರೆಯೇ ಎಂದು ವ್ಯಂಗ್ಯವಾಡಿದರು.

ತಾಲೂಕಿನ ದಡದಹಳ್ಳಿ ಗ್ರಾಮದ ರಮೇಶ್ ಅಪಘಾತ ಪ್ರಕರಣ ಕೊಲೆ ಎಂದು ಹೇಳಲಾಗುತ್ತಿದೆ. ಆತ ಕಾಂಗ್ರೆಸ್ ಕಾರ್ಯಕರ್ತನಾದರೂ, ಈ ಪ್ರಕರಣವನ್ನು ರಾಜಿ ಮಾಡಲು ಶಾಸಕ ಸಿ.ಪುಟ್ಟರಂಗಶೆಟ್ಟಿ ಮಧ್ಯಸ್ಥಿಕೆ ವಹಿಸಿದ್ದರು, ಆ ನಂತರ ಕ್ಷೇತ್ರದಲ್ಲಿ ನಾಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ಶಾಸಕರನ್ನು ಮುಖ್ಯವಾಗಿ ತನಿಖೆಗೆ ಒಳಪಡಿಸಬೇಕು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐಗೆ ವಹಿಸಬೇಕು. ರಮೇಶ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಮೂರ್ತಿ, ಮುಖಂಡ ರೇವಣ್ಣ, ರಾಜಶೇಖರ್, ಮೂಡಹಳ್ಳಿ ಮೂರ್ತಿ, ಶಿವಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net