ನಂಜೇದೇವನಪುರ ಡೇರಿ ವಾರ್ಷಿಕ ಸಭೆ

13chn5
Published on

ಚಾಮರಾಜನಗರ : ಜಿಲ್ಲೆಯ ರೈತರು ಹೆಚ್ಚು ಹಾಲು ಪೊರೈಕೆ ಮಾಡುವ ಮೂಲಕ ಹೈನುಗಾರಿಕೆ ಕ್ರಾಂತಿ ಮಾಡಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು ತಿಳಿಸಿದರು.
ತಾಲೂಕಿನ ನಂಜೇದೇವನಪುರ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನಂಜೇದೇವನಪುರ ಡೇರಿಯು 90 ಲಕ್ಷ ರೂ.ಗಳಿಗೂ ಹೆಚ್ಚಿನ ಹಾಲು ಖರೀದಿಸಿ, 3.33 ಲಕ್ಷ ರೂ.ಗಳ ನಿವ್ವಳ ಪಡೆದುಕೊಂಡಿದೆ. ಇದರಲ್ಲಿ ಬೋನಸ್ ಆಗಿ ಉತ್ಪಾದಕರಿಗೆ 1.54 ಲಕ್ಷ ರೂ. ನೀಡಲಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಡೇರಿಗಳು ಗುಣಮಟ್ಟದ ಹಾಲು ಸರಬರಾಜು ಮಾಡಿದ ಪರಿಣಾಮ ಒಕ್ಕೂಟ ಅಭಿವೃದ್ದಿ ಹೊಂದಲು ಸಾಧ್ಯವಾಗಿದೆ. ಜಿಲ್ಲೆಯ ಅಭಿವೃದ್ದಿಯಲ್ಲಿ ಹೈನು ಕ್ರಾಂತಿಯು ಸಹ ಮುಂಚೂಣಿಯಲ್ಲಿರುತ್ತದೆ ಎಂದರು.

ಕುದೇರಿನಲ್ಲಿರುವ ಘಟಕದಲ್ಲಿ 6 ಲಕ್ಷ ಲೀಟರ್ ಹಾಲು ಶೇಖರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಈಗ 2.60 ಲಕ್ಷ ರೂ. ಹಾಲು ಪ್ರತಿ ದಿನ ಬರುತ್ತಿದೆ. ಇದು ಇನ್ನು ಸಹ ಹೆಚ್ಚು ಬರಬೇಕು. ರೈತರು ಹೆಚ್ಚಿನ ರಾಸುಗಳನ್ನು ಹೊಂದಿ ಡೇರಿಗೆ ಹಾಲು ಹಾಕುವ ಮೂಲಕ ಅರ್ಥಿಕ ಅಭಿವೃದ್ದಿಯನ್ನು ಸಾಧಿಸಬೇಕು ಎಂದು ತಿಳಿಸಿದರು.

ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ, ಸಹಕಾರ ಸಂಘಗಳ ಅಭಿವೃದ್ದಿಯಲ್ಲಿ ನೌಕರರು ಹಾಗೂ ಆಡಳಿತ ಮಂಡಳಿಯ ಪಾತ್ರ ಬಹಳಷ್ಟಿದೆ. ನಂಜೇದೇವನಪುರ ಡೇರಿ ಗುಣಮಟ್ಟದ ಹಾಲು ನೀಡಿ, ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ. ಈಗಾಗಲೇ ಒಕ್ಕೂಟ ಮತ್ತು ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ನೀಡಲಾಗಿದೆ. ಇದರ ಸದುಪಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂದರು.

ಸಂಘದ ಅಧ್ಯಕ್ಷ ಎನ್.ಎಸ್.ಶ್ರೀಕಂಠಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಬಿ. ಮಹದೇವಕುಮಾರ್, ಶ್ರೀ ರಾಜೇಂದ್ರಸ್ವಾಮೀಜಿ, ಪಿ. ರಾಜಣ್ಣ, ಗ್ರಾ.ಪಂ. ಅಧ್ಯಕ್ಷ ಪಿ. ಶೇಖರಪ್ಪ, ನೌಕರರ ಸಂಘದ ಅಧ್ಯಕ್ಷ ಪಿ.ಶಾಂತು, ಚಾಮುಲ್ ವಿಸ್ತರಾಧಿಕಾರಿ ನಾಗೇಶ್, ಸಂಘದ ಉಪಾಧ್ಯಕ್ಷ ನೀಲಕಂಠಪ್ಪ, ನಿರ್ದೇಶಕ ವೀರೂಪಾಕ್ಷ, ಗುರುಮಲ್ಲಪ್ಪ, ಮಾದಪ್ಪ, ಮಹದೇವಪ್ಪ, ನಾಗರಾಜು, ಚಿಕ್ಕಮಾದೇಗೌಡ, ಮಹದೇವೇಗೌಡ, ಶಿವಮ್ಮ, ಗುರುತಾಯಮ್ಮ, ಹಾಲು ಪರೀಕ್ಷಕ ಮಹದೇವಪ್ಪ, ಸಹಾಯಕ ಮಾದಪ್ಪ, ಸಂಘದ ಸರ್ವ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net