

ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇಶ್ವರ ಕಾಲನಿಯಲ್ಲಿ ಉಪ್ಪಾರ ಸಮುದಾಯದ ವತಿಯಿಂದ ಮಂಗಳವಾರ ಅದ್ದೂರಿಯಾಗಿ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು.
ಗ್ರಾಮದ ಶ್ರೀಸಿದ್ದಪ್ಪಾಜಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿ ಮೆರವಣಿಗೆಗೆ ಯಜಮಾನರು ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಶ್ರೀ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ಗ್ರಾಮವನ್ನು ಹಸಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೀದಿಗಳಲ್ಲಿ ಬಗೆಬಗೆಯ ರಂಗೋಲಿ ಬಿಟ್ಟು ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಯುವಕರು ಶ್ರೀ ಭಗೀರಥ ಮಹರ್ಷಿಗಳ ಪರವಾಗಿ ಜೈಕಾರ ಕೂಗಿ ಸಂಭ್ರಮಿಸಿದರು. ಮುಖಂಡರಾದ ಮಹದೇವಶೆಟ್ಟಿ, ಬಸವಶೆಟ್ಟಿ, ಅಂಗಡಿ ಮಹದೇವಶೆಟ್ಟಿ, ಕಾಳಶೆಟ್ಟಿ, ಭಗೀರಥ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.