

ಚಾಮರಾಜನಗರ : ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಸೆ.9 ರಂದು ಆಯೋಜಿಸಿದ್ದ ಲೋಕ್‌ಅದಾಲತ್‌ನಲ್ಲಿ 16,035 ಪ್ರಕರಣಗಳು ಇತ್ಯರ್ಥವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಮಾಹಿತಿ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿರುವ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿಗಿಂತಲೂ ಈ ಬಾರಿಯ ಲೋಕ್‌ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳು ರಾಜೀಯಾಗಿದ್ದು, ನ್ಯಾಯಾಲಯ ಪ್ರಕರಣಗಳು ಮತ್ತು ವ್ಯಾಜ್ಯಪೂರ್ವ ಪ್ರಕರಣಗಳು ಸೇರಿದಂತೆ ಚಾಮರಾಜನಗರ ನ್ಯಾಯಾಲಯದಲ್ಲಿ 8458, ಯಳಂದೂರು 1094, ಕೊಳ್ಳೇಗಾಲ 4889 ಹಾಗೂ ಗುಂಡ್ಲುಪೇಟೆ ನ್ಯಾಯಾಲಯದಲ್ಲಿ 1603 ಪ್ರಕರಣಗಳು ಸೇರಿದಂತೆ ಒಟ್ಟಾರೆ 16,035 ಪ್ರಕರಣಗಳನ್ನು ಸಾರ್ವಜನಿಕರು ಇತ್ಯರ್ಥಗೊಳಿಸಿಕೊಂಡಿದ್ದಾರೆ. ನ್ಯಾಯಾಲಯದ ದಂಡ ಹಾಗೂ ಪರಿಹಾರ ರೂಪದಲ್ಲಿ ಈ ಪ್ರಕರಣಗಳಿಂದ 7.72 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಾರಿಯ ಲೋಕ್‌ಅದಾಲತ್‌ನಲ್ಲಿ ಸುಮಾರು 22 ವರ್ಷಗಳ ಹಿಂದಿನ ವ್ಯಾಜ್ಯವೊಂದು ಇತ್ಯರ್ಥವಾಗಿರುವುದು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚಾಮರಾಜನಗರದಲ್ಲಿ 2 ಮತ್ತು ಕೊಳ್ಳೇಗಾಲದಲ್ಲಿ 1 ವಿಚ್ಛೇಧನ ಪ್ರಕರಣಗಳು ಇತ್ಯರ್ಥವಾಗಿರುವುದು ಸಂತಸದ ವಿಚಾರವಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಿದೆ. ಈ ಬಾರಿಯ ಲೋಕ್‌ಅದಾಲತ್ ಯಶಸ್ಸಿಗೆ ಶ್ರಮಿಸಿದ ವಿವಿಧ ಇಲಾಖೆಗಳು, ವಕೀಲರು ಹಾಗೂ ಇತರರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಗೋಷ್ಠಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ್, ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಉಪಾಧ್ಯಕ್ಷ ಮಂಜು ಹಾಜರಿದ್ದರು.