ಹೆಚ್ಚಿನ ಜಾಗೃತಿಯಿಂದ ಏಡ್ಸ್ ನಿಯಂತ್ರಣ ಸಾಧ್ಯ

13raju5
Published on

ಚಾಮರಾಜನಗರ : ಎಚ್‌ಐವಿ/ಏಡ್ಸ್ ಮಾರಣಾಂತಿಕ ಖಾಯಿಲೆಯಾಗಿದ್ದು, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಪಾರಾಗಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಸಲಹೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ವತಿಯಿಂದ ಯುವ ಜನೋತ್ಸವ -2023 ಕಾರ್ಯಕ್ರಮದ ಅಂಗವಾಗಿ ಬುಧವಾರ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಎಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮ್ಯಾರಥಾನ್ ಆಯೋಜನೆ ಮಾಡಿರುವುದು ಗಮನರ್ಹ. ಈ ಕುರಿತು ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಿದರೆ, ಜನರು ಸುರಕ್ಷಿತ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಿದರೆ ಏಡ್ಸ್ ನಿಯಂತ್ರಣ ಸಾಧ್ಯ. ಇದರ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಇದೊಂದು ಮಾರಣಾಂತಿಕ ಖಾಯಿಲೆಯಾಗಿದ್ದು, ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಸೂಕ್ತವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯರೋಗ ಅಧಿಕಾರಿ ಡಾ.ಎಂ.ಎಸ್.ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 2008-09ರಲ್ಲಿ ಏಡ್ಸ್ ಪಾಸಿಟಿವಿಟಿ ದರ ಶೇ.4.2 ಇತ್ತು. ಕಳೆದ ವರ್ಷದ ಅಂಕಿಅಂಶಗಳ ಪ್ರಕಾರ ಶೇ.0.2 ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಎಚ್‌ಐವಿ ಒಂದು ಪ್ರಕರಣ ಮಾತ್ರ ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಏಡ್ಸ್ ಬಗ್ಗೆ ಅರಿವು ಹೆಚ್ಚಾಗಿರುವ ಪರಿಣಾಮ ಕಡಿಮೆಯಾಗಲು ಕಾರಣವಾಗಿದೆ. ಮುಂದಿನ ಪೀಳಿಗೆಗೂ ಏಡ್ಸ್ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ಡಾ.ಶ್ರೀನಿವಾಸ್, ಡಾ.ಶ್ವೇತಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರಾರಂಭವಾದ ಮ್ಯಾರಥಾನ್ ಓಟ ಬಿ.ರಾಚಯ್ಯ ಜೋಡಿರಸ್ತೆ, ಡಿವೈಎಸ್ಪಿ ಕಚೇರಿ, ನ್ಯಾಯಾಲಯ ರಸ್ತೆ, ಅಂಬೇಡ್ಕರ್ ಭವನ ರಸ್ತೆ, ಸತ್ತಿ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಡಿವಿಯೇಷನ್ ರಸ್ತೆ, ಪಚ್ಚಪ್ಪ ಸರ್ಕಲ್ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಂತ್ಯಗೊಂಡಿತು. ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net