ಅಂತರರಾಜ್ಯ ಗಡಿಯನ್ನು ತಡೆದು ಪ್ರತಿಭಟನೆ

13raju2
Published on

ಚಾಮರಾಜನಗರ : ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಪುನಜನೂರು ಬಳಿ ರಾಜ್ಯದ ಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಪುಣಜನೂರು ಅಂತರಾಜ್ಯ ಚೆಕ್‌ಪೋಸ್ಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ಗಡಿ ಬಂದ್ ಮಾಡಿ ಕಾವೇರಿ ನದಿನೀರು ನಿರ್ವಹಣಾ ಸಮಿತಿಯ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಪ್ರತಿಭಟನೆಯಿಂದಾಗಿ ಗಡಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು, ಬಳಿಕ ರೈತರನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ, ಜಲಾಶಯಗಳಲ್ಲಿ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನದಿನೀರು ನಿರ್ವಹಣಾ ಸಮಿತಿ ಕಾವೇರಿ, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಸೂಚನೆ ನೀಡಿರುವುದು ಅತ್ಯಂತ ಖಂಡನೀಯ. ಕಾವೇರಿ ನದಿನೀರು ನಿರ್ವಹಣಾ ಸಮಿತಿ ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಿದ್ದು, ನಿರಂತರವಾಗಿ ರಾಜ್ಯಕ್ಕೆ ದ್ರೋಹವೆಸಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಬೇಕು. ತಮಿಳುನಾಡಿಗೆ 5 ಲೀ. ನೀರನ್ನು ಕೂಡ ಹರಿಸದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ಇರುವಾಗ, ತಮಿಳುನಾಡು ಸರ್ಕಾರ ಮೂರನೇ ಬೆಳೆಗೆ ನೀರು ಕೇಳುತ್ತಿದೆ. ನಿರಂತರವಾಗಿ ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ಮೇಲೆ ಸವಾರಿ ಮಾಡುತ್ತಿದೆ. ರಾಜ್ಯದಲ್ಲಿರುವ ತಮಿಳರು ಇಲ್ಲಿ ನೀರು ಕುಡಿಯುವುದಿಲ್ಲವೇ, ಇಲ್ಲಿ ವ್ಯವಸಾಯ ಮಾಡುವುದಿಲ್ಲವೇ ಇದನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೇ ರಾಜ್ಯದಲ್ಲಿರುವ ತಮಿಳರನ್ನು ಅಲ್ಲಿನ ಸರ್ಕಾರ ವಾಪಸ್ ಕರೆಯಿಸಿಕೊಳ್ಳಲಿ. ಇದು ಈಗೇಯೇ ಮುಂದುವರಿದರೆ ರಾಜ್ಯದಲ್ಲಿ ತಮಿಳು ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಹಾಲಿನ ನಾಗರಾಜು, ಪಟೇಲ್ ಶಿವಮೂರ್ತಿ, ಮಲೆಯೂರು ಹರ್ಷ, ಉಡಿಗಾಲದ ಮಂಜುನಾಥ್, ಮಲೆಯೂರು ಬಸವರಾಜಪ್ಪ, ಅರಳೀಕಟ್ಟೆ ಕುಮಾರ್, ಮಹೇಂದ್ರ, ಮಂಜು, ರೇವಣ್ಣ, ಪ್ರಭು, ಸಿದ್ದಪ್ಪ, ರಾಜಪ್ಪ, ಮಹೇಶ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net