ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

13raju1
Published on

ಚಾಮರಾಜನಗರ: ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚನೆ ನೀಡಿರುವ ಕಾವೇರಿ ನಿರ್ವಹಣಾ ಸಮಿತಿಯ ನಿಲುವನ್ನು ಖಂಡಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಚಾಮರಾಜೇಶ್ವರ ಮುಂಭಾಗದಲ್ಲಿ ಜಮಾಯಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಮೂಲಕ ತೆರೆಳಿ, ಶ್ರೀ ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು. ಕಾವೇರಿ ನಿರ್ವಹಣಾ ಸಮಿತಿ ಸತ್ತಿದೆ ಎಂದು ಹೂ, ಕಡ್ಲೇಪುರಿ, ಬಿಡಿಗಾಸು ಎರಚಿ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಜಲಾಶಯಗಳಲ್ಲಿ ನೀರು ಇಲ್ಲದಿದ್ದರೂ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ತಮಿಳುನಾಡಿಗೆ 15 ದಿನಗಳ ಕಾಲ ನಿರಂತರವಾಗಿ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ರಾಜ್ಯಕ್ಕೆ ಸೂಚಿಸಿರುವುದು ಅತ್ಯಂತ ಖಂಡನೀಯ. ಕಾವೇರಿ ನಿರ್ವಹಣಾ ಸಮಿತಿ ತಮಿಳುನಾಡಿನ ಪರವಾಗಿದ್ದು, ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬರುತ್ತಿದೆ. ಈ ಕಾರಣಕ್ಕೆ ಕಾವೇರಿ ನಿರ್ವಹಣಾ ಸಮಿತಿ ನಮ್ಮ ಪಾಲಿಗೆ ಸತ್ತಿದೆ ಎಂದು ಹೂ, ಕಡ್ಲೇಪುರಿ, ಅರಿಶಿಣ ಕುಂಕುಮ ಹಾಗೂ ಬಿಡಿಗಾಸನ್ನು ಎರಚಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗಿಲ್ಲ, ಜಲಾಶಯಗಳಲ್ಲಿ ನೀರು ಇಲ್ಲದೇ ಇದ್ದರೂ ಎಲ್ಲಿ ನೀರು ಹರಿಸಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯನ್ನು ಕರೆದಿದ್ದು, ಏನಾದರೂ ತಮಿಳುನಾಡಿಗೆ ನೀರು ಬಿಡದೇ, ಯಾರ ಒತ್ತಡಕ್ಕೂ ಮಣಿಯದೇ ರಾಜ್ಯದ ಹಿತವನ್ನು ಕಾಪಾಡಬೇಕು. ತಮಿಳುನಾಡು ಸರ್ಕಾರ ಒಂದು ಗೋಸುಂಬೆಯಂತೆ ವರ್ತನೆ ಮಾಡುತ್ತಿದ್ದು, ಪ್ರತಿ ಬಾರಿಯೂ ನೀರಿನ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಶಾಮುರಳಿ, ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ಮಹೇಶ್‌ಗೌಡ, ಚಾ.ವೆಂ.ರಾಜ್ ಗೋಪಾಲ್, ರವಿಚಂದ್ರಪ್ರಸಾದ್‌ಕಹಳೆ, ಚಾ.ಹ.ರಾಮು, ತಾಂಡವಮೂರ್ತಿ, ಚಾ.ಸಿ.ಸಿದ್ದರಾಜು, ಚಾ.ರಾ.ಕುಮಾರ್, ನಂಜುಂಡಸ್ವಾಮಿ, ಬಸವರಾಜು, ಆಟೋನಾಗೇಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net