ಕಪ್ಪುಶಿಲೆಯಲ್ಲಿ ಸಂವಿಧಾನದ ಪೀಠಿಕೆ

13chn2
Published on

ಚಾಮರಾಜನಗರ: ಸರ್ಕಾರಿ ಶಾಲೆಯ ಮುಂಭಾಗ ಕಪ್ಪುಶಿಲೆಯಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಪ್ರತಿಷ್ಠಾಪಿಸುವ ಮೂಲಕ ಶಿಕ್ಷಕರು ಮಾದರಿಯಾಗಿದ್ದಾರೆ.

ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.15 ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಭಾರತದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಶಾಲೆಯ ಮುಂಭಾಗ ಕಪ್ಪು ಶಿಲೆಯಲ್ಲಿ ಸಂವಿಧಾನದ ಪೀಠಿಕೆಯನ್ನು ಪ್ರತಿಷ್ಠಾಪಿಸುವ ಮೂಲಕ ಗಮನ ಸೆಳೆದಿದೆ.

ಶಾಲೆಯ ಮುಖ್ಯಶಿಕ್ಷಕ ಪುಟ್ಟರಾಜು ಹಾಗೂ ಸಹ ಶಿಕ್ಷಕ ನಂಜುಂಡಯ್ಯ ಚಿಂತನೆ ಹಾಗೂ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ್ ಸಂವಿಧಾನ ಪೀಠಿಕೆಯನ್ನು ವಿಭಿನ್ನ ರೀತಿಯಲ್ಲಿ ಸ್ಥಾಪಿಸಿ ಮಕ್ಕಳಿಗೆ ಅರಿವು ಮೂಡಿಸುವ ಕೆಲಸಕ್ಕೆ ಮುಂದಾದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಹಳೆಯ ವಿದ್ಯಾರ್ಥಿಗಳು ಹಾಗೂ ಅನೇಕ ದಾನಿಗಳ ಸಹಕಾರದಿಂದ ಕಪ್ಪು ಶಿಲೆಯಲ್ಲಿ ಸಂವಿಧಾನದ ಪೀಠಿಕೆಯನ್ನು ಶಾಲೆಯ ಮುಂಭಾಗ ಪ್ರತಿಷ್ಠಾಪನೆ ಮಾಡುವ ಮೂಲಕ, ಸೆ.15 ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಕ್ಕೆ ಅರ್ಥಪೂರ್ಣವಾದ ಕಾರ್ಯಕ್ರಮ ಆಯೋಜಿಸಿದೆ.

ಹಲವರ ಸಹಕಾರ:
ಸಿದ್ದಯ್ಯನಪುರ ಶಾಲೆಯ ಮುಂಭಾಗ ಸ್ಥಾಪಿಸಿರುವ ಕಪ್ಪು ಶಿಲೆಯ ಸಂವಿಧಾನ ಪೀಠಿಕೆಗೆ ಹಲವಾರು ಜನರ ಸಹಕಾರವಿದೆ. ಎಸ್.ಎಲ್.ವಿ ಗ್ರಾನೈಟ್‌ನ ಸುದರ್ಶನ್ ಉಚಿತವಾಗಿ ಕಪ್ಪುಶಿಲೆ ನೀಡಲಾಗಿದ್ದು, ಸಮಾಜ ಸೇವಕರು ಲಯನ್ಸ್ ಸುರೇಶ್ ಪ್ರೊತ್ಸಾಹ ನೀಡಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಆಂಜನೇಯ ಸ್ಥಳದಲ್ಲೇ ನಿಂತು ನಿರ್ಮಾಣದ ಕೆಲಸವನ್ನು ಮಾಡುವುದರ ಮೂಲಕ ಬೆಂಬಲಾಗಿ ನಿಂತಿದ್ದಾರೆ. ಶಾಲೆಯ ಹಳೆಯ ವಿದ್ಯಾರ್ಥಿಗಳು, ಊರಿನ ಯಜಮಾನರು, ಗ್ರಾ.ಪಂ ಸದಸ್ಯರು ಹಾಗೂ ಇತರರು ಸಹಕಾರದೊಂದಿಗೆ ಇದನ್ನು ನಿರ್ಮಾಣ ಮಾಡಲಾಗಿದೆ.

ಸೆ.15 ರಂದು ಉದ್ಘಾಟನೆ:
ಸಿದ್ದಯ್ಯನಪುರ ಶಾಲೆಯ ಮುಂಭಾಗ ನಿರ್ಮಾಣ ಮಾಡಿರುವ ಕಪ್ಪುಶಿಲೆಯ ಸಂವಿಧಾನ ಪೀಠಿಕೆಗೆ ಸುಮಾರು 25 ಸಾವಿರ ರೂ.ಗಿಂತಲೂ ಹೆಚ್ಚು ಹಣ ಖರ್ಚಾಗಿದ್ದು, ಸೆ.15 ರ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಉದ್ಘಾಟನೆ ಮಾಡಲಾಗುತ್ತಿದೆ. 5 ಅಡಿ ಉದ್ದ ಮತ್ತು 3 ಅಡಿ ಅಗಲವಿರುವ ಕಪ್ಪುಶಿಲೆಯಲ್ಲಿ ಅಂಬೇಡ್ಕರ್ ಭಾವಚಿತ್ರದ ಜತೆಗೆ ಸಂವಿಧಾನ ಪೀಠಿಕೆ ಇದೆ. ಶಾಲೆಗೆ ಸಂಪೂರ್ಣ ಬಣ್ಣ ಬಳಿದು ಸಿಂಗಾರ ಮಾಡಲಾಗಿದ್ದು, ಅದೇ ದಿನವೇ ವೆಂಟಯ್ಯನಛತ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಆಯೋಜನೆ ಮಾಡಲಾಗಿದೆ.

ಶಾಲೆಯ ಸಹ ಶಿಕ್ಷಕರ ಸಹಕಾರದೊಂದಿಗೆ ಕಪ್ಪುಶಿಲೆಯಲ್ಲಿ ಸಂವಿಧಾನ ಪೀಠಿಕೆ ಪ್ರತಿಷ್ಠಾಪಿಸಲು ನಿರ್ಧರಿಸಿದೆವು. ಹಲವರ ಸಹಕಾರದಿಂದ ನಿರ್ಮಾಣವಾಗಿದೆ. ಸೆ.15 ರ ಪ್ರಜಾಪ್ರಭುತ್ವ ದಿನದಂದು ಉದ್ಘಾಟನೆ ಮಾಡುತ್ತೇವೆ.-ನಾರಾಯಣ್, ದೈಹಿಕ ಶಿಕ್ಷಣ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದಯ್ಯನಪುರ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net