ಹೈನುಗಾರಿಕೆಯಿಂದ ಸಮೃದ್ದಿ ಜೀವನ ನಿರ್ವಹಣೆ

13chn4
Published on

ಚಾಮರಾಜನಗರ: ರೈತರು ಹೈನುಗಾರಿಕೆಯ ಜತೆಗೆ ಉಪ ಕಸುಬುಗಳನ್ನು ಅಳವಡಿಸಿಕೊಂಡು ಸ್ವಾವಲಂಬಿ ಹಾಗೂ ಸಮೃದ್ದಿ ಜೀವನ ನಡೆಸಲು ಸಾಧ್ಯವಿದೆ ಎಂದು ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ ತಿಳಿಸಿದರು.

ತಾಲೂಕಿನ ಹಳೇಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಹೈನುಗಾರಿಕೆಯನ್ನು ಪ್ರಮುಖ ಉದ್ಯಮವಾಗಿಸುವ ಜತೆಗೆ, ರೈತರು ಅಡುಗೆ ಗ್ಯಾಸ್ ಅನ್ನು ಸಹ ಸಗಣಿಯಲ್ಲಿ ತಯಾರು ಮಾಡಿಕೊಳ್ಳುವ ಸುಲಭ ವಿಧಾನವನ್ನು ಅನುಷ್ಠಾನ ಮಾಡಿಕೊಳ್ಳಬೇಕು. ಗುಜರಾತ್‌ನಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಕಡಿಮೆ ಪ್ರಮಾಣದ ಜಾಗದಲ್ಲಿ ಗ್ಲೂಬರ್ ಗ್ಯಾಸ್ ಘಟಕ ಅಳವಡಿಸಿಕೊಂಡು ತಮ್ಮ ಮನೆಗೆ ಅಗತ್ಯವಾದಷ್ಟು ಅಡುಗೆ ಅನಿಲ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅಡುಗೆ ಅನಿಲ ಸಿಲಿಂಡರ್ ಖರೀದಿಸುವುದು ತಪ್ಪುತ್ತದೆ. ಈ ಘಟಕದಿಂದ ಹೊರ ಬಂದ ಸಗಣಿಯು ಸಹ ಜಮೀನಿಗೆ ಉತ್ತಮ ಗೊಬ್ಬರವಾಗುತ್ತದೆ. ಇಳುವಳಿಯು ಚೆನ್ನಾಗಿರುತ್ತದೆ. ಹಸಿ ಮೇವು ಬೆಳೆಯುವುದರಿಂದ ರಾಸುಗಳಲ್ಲಿ ಪ್ಯಾಟ್ ಅಂಶ ಹೆಚ್ಚಾಗಿ ಹಾಲಿನ ಗುಣಮಟ್ಟವು ವೃದ್ದಿಯಾಗುತ್ತದೆ ಎಂದರು.

ಹಳೇಪುರ ಡೇರಿ ಉತ್ತಮವಾಗಿ ನಡೆಯುತ್ತಿದ್ದು, ಒಕ್ಕೂಟದಿಂದ ಸಭಾಂಗಣ ನಿರ್ಮಿಸಿಕೊಳ್ಳಲು 2 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದ ಅಧ್ಯಕ್ಷರು, ತಾಲೂಕಿನ ನಿರ್ದೇಶಕರಾದ ಎಚ್.ಎಸ್. ಬಸವರಾಜಪ್ಪ ಹಾಗೂ ಸದಾಶಿವಮೂರ್ತಿ ಅವರು ಒಪ್ಪಿಗೆ ಮೇರೆಗೆ ನಿಮ್ಮ ಸಂಘಕ್ಕೆ 2 ಲಕ್ಷ ರೂ. ನೀಡಲು ಬದ್ದನಾಗಿರುವುದಾಗಿ ನಾಗೇಂದ್ರ ಘೋಷಣೆ ಮಾಡಿದರು.

ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಮಾತನಾಡಿ, ಹಾಲಿನ ಡೇರಿಯಿಂದ ಗ್ರಾಮದ ಪ್ರಗತಿಯಾಗುತ್ತದೆ. ರೈತರು ಸಹ ಗುಣಮಟ್ಟದ ಹಾಲು ಪೊರೈಕೆ ಮಾಡಿ ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯಬೇಕು ಎಂದು ತಿಳಿಸಿದರು.

ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ, ಸಂಘದ ಅಧ್ಯಕ್ಷ ಪಿ. ಬಸವಣ್ಣ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಕೆ. ಮರಿಸ್ವಾಮಿ, ಸಂಘದ ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕ ನಬಿ. ಸುಂದರ್, ಎಂ. ಮಹದೇವೇಗೌಡ, ಮಂಜಿ ಮಹದೇವೇಗೌಡ, ಎಂ. ಮಾದೇಶ್, ಬಸವಣ್ಣ, ಎಂ. ರೇವಣ್ಣ, ಶಿವಯ್ಯ, ಕೆಂಪೇಗೌಡ, ಭದ್ರಮ್ಮ, ನೌಕರರಾದ ಬಿ. ಮಹೇಶ್, ಬಿ. ರಮೇಶ್ ಹಾಗೂ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net