

ಚಾಮರಾಜನಗರ:ನಗರದಲ್ಲಿರುವ ಆಟೋಗಳಿಗೆ ಸಂಚಾರ ಪೊಲೀಸ್ ಠಾಣೆ ವತಿಯಿಂದ ಸಿಟಿಪಿಎಸ್ ನಂಬರ್ ಅಳವಡಿಕೆ ಮಾಡುತ್ತಿದ್ದು, ನಂಬರ್ ಅಳವಡಿಕೆ ನಂತರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವರೇ ಎಂಬ ಮಾತುಗಳು ಆಟೋ ಚಾಲಕರಿಂದ ಕೇಳಿಬರುತ್ತಿವೆ.
ನಗರದ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಆಟೋಗೂ ಜಿಲ್ಲಾ ಸಂಚಾರ ಪೊಲೀಸರು ಕಳೆದ ವಾರದಿಂದ ಚಾಮರಾಜನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಿಟಿಪಿಎಸ್ ನಂಬರ್ ಅಳವಡಿಕೆ ಮಾಡುತ್ತಿದ್ದಾರೆ. ಕೋವಿಡ್‌ಗೂ ಮುನ್ನ ನಗರದ ಆಟೋಗಳಿಗೆ ಸಿಟಿಪಿಎಸ್ ನಂಬರ್ ಅಳವಡಿಸಿ, ಆಟೋ ಚಾಲನೆಯಲ್ಲಿ ಕಟ್ಟುನಿಟ್ಟಿನ ಬದಲಾವಣೆ ತರುವ ಪ್ರಯತ್ನವನ್ನು ಪೊಲೀಸ್ ಇಲಾಖೆ ಮಾಡಿತ್ತು. ಆದರೆ ಕೆಲವು ದಿನಗಳು ಮಾತ್ರ ನಂಬರ್ ನೀಡುತ್ತೇವೆಂದು ಈ ನಿಯಮವನ್ನು ಕೈ ಬಿಟ್ಟಿದ್ದರು. ಆಟೋಗಳ ಸಂಚಾರ, ವಾಹನಗಳ ದಟ್ಟನೆ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಆಟೋಗಳಿಗೆ ಮತ್ತೆ ಸಿಟಿಪಿಎಸ್ ನಂಬರ್ ನೀಡಲು ನಗರ ಸಂಚಾರ ಪೊಲೀಸರು ಮುಂದಾಗಿದ್ದಾರೆ.
ನಗರದಲ್ಲಿರುವ ಸಾಕಷ್ಟು ಅಟೋ ಚಾಲಕರ ಬಳಿ, ಆಟೋಗೆ ಸಂಬಂಧಿಸಿದ ದಾಖಲೆಗಳು ಇರುವುದಿಲ್ಲ. ಕೆಲವು ಆಟೋಗಳನ್ನು ಹೊರ ರಾಜ್ಯಗಳಿಂದ ತಂದು ಇಲ್ಲಿ ಬಾಡಿಗೆ ಓಡಿಸುತ್ತಿರುತ್ತಾರೆ. ಅಥವರ ಆಟೋಗಳು ಒಂದು ವೇಳೆ ಅಪಘಾತಕ್ಕೆ ತುತ್ತಾದರೆ ಪ್ರಯಾಣಿಕರು ಹಾಗೂ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ವಿಮೆ ಇಲ್ಲದೆ ಆಟೋ ಚಾಲನೆ ಮಾಡುವುದರಿಂದ ಇಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸರು ಸಿಟಿಪಿಎಸ್ ನಂಬರ್ ನೀಡಿ ಆಟೋ ಪ್ರಯಾಣದಲ್ಲಿ ಪಾರದರ್ಶಕತೆ ತರಲು ಮುಂದಾಗಿದ್ದಾರೆ. ಆಟೋ ಚಾಲಕರು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
ಸಿಟಿಪಿಎಸ್ ನಂಬರ್ ಪಡೆಯುವುದು ಹೇಗೆ ?
ಎಲ್ಲ ಚಾಲಕರು ತಮ್ಮ ಆಟೋಗೆ ಸಂಬಂಧಿಸಿದ ಪರ್ಮಿಟ್, ಡಿಎಲ್, ಎಫ್‌ಸಿ, ವಿಮೆ ಹಾಗೂ ಇತರ ದಾಖಲೆಗಳನ್ನು ನಗರ ಸಂಚಾರ ಪೊಲೀಸರಿಗೆ ಸಲ್ಲಿಸಿ, ನಿಗದಿಪಡಿಸಿರುವ ಹಣವನ್ನು ಕಟ್ಟಿ ಸಿಟಿಪಿಎಸ್ ನಂಬರ್ ಪಡೆಯಬಹುದಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಆಟೋಗಳಿಗೆ ಸಿಟಿಪಿಎಸ್ ನಂಬರ್ ನೀಡಲಾಗಿದ್ದು, ಸಾಕಷ್ಟು ಆಟೋ ಚಾಲಕರು ನಂಬರ್ ಪಡೆಯಲು ಠಾಣೆಯ ಮುಂದೆ ಸಾಲುಗಟ್ಟಿದ್ದರು.
ಇಂತಿಷ್ಟು ಕಾಲಾವಕಾಶ ನೀಡಿ:
ಸಿಟಿಪಿಎಸ್ ನಂಬರ್ ನೀಡುತ್ತಿರುವುದು ಚಾಲಕರು ಮತ್ತು ಪ್ರಯಾಣಿಕರ ದೃಷ್ಟಿಯಲ್ಲಿ ಒಳ್ಳೆಯ ಕೆಲಸ. ಆದರೆ ಈ ಮೊದಲು ಆಟೋ ಚಾಲಕರಿಗೆ ನಂಬರ್ ನೀಡಲು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಇಂತಿಷ್ಟು ಕಾಲಾವಕಾಶ ನೀಡಿದ್ದರು. ಈಗ ಶಾಲೆಗಳು ಪ್ರಾರಂಭವಾಗುವ ಸಮಯವಾಗಿದ್ದು, ಪ್ರಕ್ರಿಯೆಗೆ ತೊಂದರೆ ಆಗಬಹುದು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾಲಾವಕಾಶ ಕಲ್ಪಿಸಬೇಕು ಎಂದು ಹಲವು ಆಟೋ ಚಾಲಕರು ಮನವಿ ಮಾಡಿದರು.
ನಿಯಮ ಕಟ್ಟುನಿಟ್ಟು ಅತ್ಯಗತ್ಯ:
ನಗರ ಸಂಚಾರ ಪೊಲೀಸರು ಸಿಟಿಪಿಎಸ್ ನಂಬರ್ ಅಳವಡಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ. ಜತೆಗೆ ಮತ್ತಷ್ಟು ಸಂಚಾರ ಶಿಸ್ತನ್ನು ವಾಹನ ಚಾಲಕರಲ್ಲಿ ಮೂಡಿಸಬೇಕಿದೆ. ಶ್ರೀ ಭುವನೇಶ್ವರಿ ವೃತ್ತದಲ್ಲಿ ಆಟೋ ಚಾಲಕರು ಸಾಲಿನಲ್ಲಿ ಸಾಗುತ್ತಿದ್ದರೆ, ಸಾಕಷ್ಟು ಆಟೋ ಚಾಲಕರು ಅಡ್ಡಾದಿಡ್ಡಿಯಾಗಿ ಪ್ರಯಾಣಿಕರನ್ನು ಇಳಿಸಿ ಸಾಗುತ್ತಾರೆ. ಇದರಿಂದ ಸಾಕಷ್ಟು ಅಪಘಾತಗಳು ಸಂಭವಿಸುವುದಲ್ಲದೆ, ಸಂಚಾರ ದಟ್ಟಣೆ ಉಂಟಾಗುತ್ತದೆ. ಗ್ರಾಮಾಂತರ ಪ್ರದೇಶಗಳಿಂದ ಬರುವ ಆಟೋಗಳು ನಗರದಲ್ಲಿ ಪ್ರಯಾಣಿಕರನ್ನು ಕರೆದು ಹೋಗುವುದರಿಂದ ನಂಬರ್ ಪಡೆದ ಆಟೋ ಚಾಲಕರಿಗೆ ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಪೋಲೀಸರು ಕಟ್ಟುನಿಟ್ಟಾಗಿ ಕ್ರಮವಹಿಸಬೇಕು ಎಂದು ಅಟೋ ಚಾಲಕರು ಮನವಿ ಮಾಡಿದ್ದಾರೆ.
ನಗರದಲ್ಲಿ ಟ್ರಾಫಿಕ್ ಪೊಲೀಸರು ಆಟೋಗಳಿಗೆ ನಂಬರ್ ನೀಡುತ್ತಿರುವುದು ಚಾಲಕರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಒಳ್ಳೆಯದಾಗಿದೆ. ಆದರೆ ಕಾಲಾವಕಾಶ ನೀಡಬೇಕು. 10-15 ದಿನ ಇದನ್ನು ಮಾಡಿ ನಿಲ್ಲಿಸಿಬಿಡಬಾರದು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಆಟೋ ಚಾಲಕರಿಗೆ ಅನುಕೂಲವಾಗುತ್ತದೆ.
ನಾಗರಾಜ್, ಅಧ್ಯಕ್ಷ, ಶ್ರೀಭುವನೇಶ್ವರಿ ಆಟೋ ಚಾಲಕರು, ಮಾಲೀಕರ ಸಂಘ, ಚಾ.ನಗರ
ನಗರದ ಆಟೋಗಳಿಗೆ ಟ್ರಾಫಿಕ್ ಪೊಲೀಸ್ ಸ್ಟೇಷನ್(ಸಿಟಿಪಿಎಸ್) ನಂಬರ್ ಅಳವಡಿಕೆ ಮಾಡುವುದರಿಂದ ಆಟೋ ಚಾಲಕರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲಿ ್ಲ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸುತ್ತೇನೆ.
ಪದ್ಮಿನಿ ಸಾಹು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾ.ನಗರ