

ಚಾಮರಾಜನಗರ: ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸತ್ತಿ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ/ವರ್ಗಗಳ ಹಿತರಕ್ಷಣಾ ಸಭೆಯಲ್ಲಿ ಭಾಗವಹಿಸಿದ ದಲಿತ ಮುಖಂಡರು ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲು ಇಟ್ಟಿರುವ ಅನುದಾನ ಬಳಕೆ ಮಾಡುವಲ್ಲಿ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ ಎಂದು ದೂರಿದರು.
ಮುಖಂಡ ಸಿ.ಕೆ.ಮಂಜುನಾಥ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಹೊರಗುತ್ತಿಗೆ ನೌಕರರಿಗೆ ಸಕಾಲಕ್ಕೆ ಸಂಬಳ ವಿತರಣೆ ಮಾಡಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅನುದಾನ ದುರ್ಬಳಕೆಯಾಗಿದ್ದು ಈ ಕುರಿತು ಕ್ರಮವಹಿಸಬೇಕು ಎಂದರು.
ಮುಖಂಡ ಆಲೂರು ನಾಗೇಂದ್ರ ಮಾತನಾಡಿ, ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಸಭೆ ಕರೆಯುವಂತೆ ಕ್ರಮವಹಿಸಬೇಕು. ಜಿಲ್ಲಾಡಳಿತ ಭವನದ ಮುಂಭಾಗವಿರುವ ಅಂಬೇಡ್ಕರ್ ಪುತ್ಥಳಿಗೆ ಮಂಟಪ ನಿರ್ಮಾಣಕ್ಕೆ 3 ವರ್ಷಗಳ ಹಿಂದೆ ಟೆಂಡರ್ ಕರೆದಿದ್ದು, ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಅರಳಿಕಟ್ಟೆ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರಿಗೆ ಸ್ಮಶಾನವಿಲ್ಲ ಎಂದು ದೂರಿದರು.
ಮುಖಂಡ ದಡದಹಳ್ಳಿ ಶಂಕರ್ ಮಾತನಾಡಿ, ಚಂದಕವಾಡಿ ಹೋಬಳಿ ಕೇಂದ್ರದಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಆಗಿ ಸಾಕಷ್ಟು ವರ್ಷ ಕಳೆದಿದ್ದು, ಇಂದಿಗೂ ಭವನವನ್ನು ಹಸ್ತಾಂತರ ಮಾಡಿಲ್ಲ. ಪೊಲೀಸ್ ಠಾಣೆಗಳಲ್ಲಿ ಸಭೆ ಕರೆಯುವಾಗ ದಲಿತ ಮುಖಂಡರಿಗೆ ಮಾಹಿತಿ ನೀಡುವುದಿಲ್ಲ ಎಂದು ಹೇಳಿದರು.
ತಹಶೀಲ್ದಾರ್ ಬಸವರಾಜ್ ಪ್ರತಿಕ್ರಿಯಿಸಿ, ಈಗ ಹೇಳಿರುವ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸಲು ಕ್ರಮವಹಿಸುತ್ತೇನೆ. ಈ ಕಾರ್ಯಕ್ರಮ ನೆಪಮಾತ್ರಕ್ಕೆ ಆಗಬಾರದು, ಧ್ವನಿ ಇಲ್ಲದವರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಸರ್ಕಾರ ಈ ಹಿತರಕ್ಷಣಾ ಸಮಿತಿ ಸಭೆಯನ್ನು ರಚಿಸಿದೆ. ಈ ವೇದಿಕೆ ಮೂಲಕ ಎಸ್ಸಿ,ಎಸ್ಟಿ ಸಮುದಾಯದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಪೂರ್ಣಿಮಾ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಚಿಕ್ಕ ಬಸವಯ್ಯ, ವೃತ್ತನಿರೀಕ್ಷಕ ರಾಜೇಶ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಹಾಜರಿದ್ದರು.