ವಿವಿಧ ಬೇಡಿಕೆ ಈಡೇರಿಸುಂತೆ ಒತ್ತಾಯಿಸಿ ಪ್ರತಿಭಟನೆ

12raju1
Published on

ಚಾಮರಾಜನಗರ: ಹಗಲಿನ ವೇಳೆ 8 ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು, ರೈತ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸದ ಲೈನ್‌ಮ್ಯಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು, ಸಡಿಲಗೊಂಡಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು ಎಂಬ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯ ರೈತ ಸಂಘ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿಯ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಧಿಕಾರಿಗಳ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೆಬ್ಬಸೂರು ಬಸವಣ್ಣ ಮಾತನಾಡಿ, ತಾಲೂಕಿನಲ್ಲಿ ಮಳೆ ಇಲ್ಲದೇ ಬರಗಾಲ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಕೃಷಿ ಪಂಪ್‌ಸೆಟ್‌ಗಳಿಂದ ನೀರು ಹಾಯಿಸಿ ಬೆಳೆದಿರುವ ಬೆಳೆಯೂ ಒಣಗುತ್ತಿದೆ. ಹಗಲಿನ ವೇಳೆಯಲ್ಲಿ 4 ಗಂಟೆ ನಿರಂತರ ವಿದ್ಯುತ್ ನೀಡುತ್ತೇವೆ ಎನ್ನುವ ಅಧಿಕಾರಿಗಳು ಹಲವು ಬಾರಿ ಟ್ರಿಪ್ ಮಾಡುತ್ತಿದ್ದು, ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ರೈತರ ಜತೆಗೆ ಲೈನ್‌ಮ್ಯಾನ್‌ಗಳು ಸರಿಯಾಗಿ ನಡೆದುಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಚಿನ್ನಸ್ವಾಮಿ ಕಾಡಹಳ್ಳಿ ಮಾತನಾಡಿ, ರಾತ್ರಿಯ ವೇಳೆಯಲ್ಲಿ ವಿದ್ಯುತ್ ನೀಡಿದರೆ ರೈತರಿಗೆ ತುಂಬಾ ಸಮಸ್ಯೆಗಳು ಎದುರಾಗುತ್ತದೆ. ರೈತರ ಜಮೀನಿನಲ್ಲಿ ಸಡಿಲಗೊಂಡಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಲು ಲೈನ್‌ಮ್ಯಾನ್‌ಗಳಿಗೆ ಹೇಳಿದರೆ ದರ್ಪದಿಂದ ನಡೆದುಕೊಳ್ಳುತ್ತಾರೆ. ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಕೂಡಲೇ ಬರೆಹರಿಸದೇ ಇದ್ದರೆ ನಮ್ಮ ಕುಟುಂಬದ ಸಮೇತರಾಗಿ ಕಚೇರಿ ಮುಂಭಾಗ ಅಹೋರಾತ್ರಿ ಪ್ರತಿಭಟನೆ ನಡೆಸಬೇಕಾಗುತ್ತದೆ. ಹಗಲು ವೇಳೆಯಲ್ಲಿ ನಿರಂತರ 8 ಗಂಟೆ ವಿದ್ಯುತ್ ನೀಡಬೇಕು, ಲೈನ್‌ಮ್ಯಾನ್‌ಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ಶ್ರೀಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯಪಾಲಕ ಇಂಜಿನಿಯರ್ ವಸಂತಕುಮಾರ್ ಪ್ರತಿಕ್ರಿಯಿಸಿ, ಮಳೆಗಾಲದಲ್ಲಿ ಸೂಕ್ತ ರೀತಿಯಲ್ಲಿ ಮಳೆಯಾಗಿಲ್ಲದ ಕಾರಣಕ್ಕೆ ಇಂತಹ ಸಮಸ್ಯೆಗಳು ತಲೆದೂರಿದೆ. ಹಿಂದಿನ ವರ್ಷದ ವರೆಗೂ ಹಗಲಿನ ಸಮಯದಲ್ಲೇ 7 ಗಂಟೆ ನಿರಂತರ ವಿದ್ಯುತ್ ಕೊಡುತ್ತಿದ್ದೇವು. ಬೇಸಿಗೆ ಕಾಲದಲ್ಲಿ ಲೋಡ್‌ಶೆಡ್ಡಿಂಗ್ ಹಾಗೂ ವಿದ್ಯುತ್ ಬೇಡಿಕೆಯಿಂದ ಸಾಕಷ್ಟು ಸಮಸ್ಯೆ ಉಂಟಾಯಿತು. ಈಗಾಗಲೇ ಎಇಇಗಳ ಜತೆಗೆ ಸಭೆ ನಡೆಸಿ ರೈತರ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಯಾಲ ಮಹೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್,ದೇಮಹಳ್ಳಿ ಪ್ರಸಾದ್, ಕೆರೆಹಳ್ಳಿ ಮಹೇಶ್, ಯಶ್ವಂತ್, ನಟರಾಜು, ಸಿದ್ದರಾಜು, ಶಿವಕುಮಾರ್, ಲಕ್ಷ್ಮಣ್, ಪ್ರಭು, ಸಂತೋಷ್, ಶೇಖರ್, ಚೆಲುವಣ್ಣ, ಮಲ್ಲೇಶ್, ಸುಂದರಮೂರ್ತಿ, ಚಿನ್ನಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net