ಶೀಘ್ರದಲ್ಲೇ ಲಿಂಗತ್ವ ಅಲ್ಪಸಂಖ್ಯಾತರಿಗೆ ಜಾಬ್ ಕಾರ್ಡ್

12chn5
Published on

ಚಾಮರಾಜನಗರ: ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ನೀಡುತ್ತಿರುವ ವಿವಿಧ ಯೋಜನೆಗಳು ಹಾಗೂ ಇನ್ನಿತರ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವದೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಪುನರ್ವಸತಿ ಯೋಜನೆ, ಹೆಚ್.ಐ.ವಿ ಸೋಂಕಿತ ಮಹಿಳೆಯರಿಗೆ ಧನಶ್ರೀ ಯೋಜನೆ, ಲೈಂಗಿಕ ಕಾರ್ಯಕರ್ತೆಯರಿಗೆ ಚೇತನ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮಗಳಡಿ ಫಲಾನುಭವಿಗಳಿಗೆ ಶೀಘ್ರವಾಗಿ ಸೌಲಭ್ಯಗಳು ಸಿಗಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ದೃಢೀಕೃತ ಗುರುತಿನ ಚೀಟಿ, ಬ್ಯಾಂಕ್ ಸಾಲ, ನಿವೇಶನಗಳು, ಪಡಿತರ ಚೀಟಿ, ಮುದ್ರಾ ಯೋಜನೆ ಸಾಲ, ನರೇಗಾ ಯೋಜನೆಯಡಿ ಜಾಬ್ ಕಾರ್ಡ್‌ಗಳನ್ನು ಶೀಘ್ರವೇ ತಲುಪುವಂತೆ ನೋಡಿಕೊಳ್ಳಲಾಗುವುದು ಎಂದರು.

ಲಿಂಗತ್ವ ಅಲ್ಪಸಂಖ್ಯಾತರು ಹೆಚ್.ಐ.ವಿ ಸೋಂಕಿತ ಮಹಿಳೆಯರು, ಲೈಂಗಿಕ ಕಾರ್ಯಕರ್ತೆಯರ ಸಮುದಾಯ ಸಂಸ್ಥೆಗಳಿಗೆ ಕಚೇರಿ ನಡೆಸಲು ಖಾಲಿ ಕಟ್ಟಡ ಅಥವಾ ನಿವೇಶನ ಒದಗಿಸಿಕೊಡಲು ಕ್ರಮವಹಿಸಲಾಗುವುದು. ಪ್ರತಿ ಎರಡು ತಿಂಗಳಿಗೊಮ್ಮೆ ಸ್ಥಾಯಿ ಸಮಿತಿ ಸಭೆ ಕರೆಯುವಂತೆ ಮತ್ತು ಎನ್.ಆರ್.ಎಲ್.ಎಂ ಗಳಲ್ಲಿ ಸಮುದಾಯದವರು ರಚಿಸಿರುವ ಸ್ತ್ರೀ ಶಕ್ತಿ ಗುಂಪುಗಳನ್ನು ನೋಂದಣಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು. ಇದೇ ವೇಳೆ 40 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಅಧಿಕೃತ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಯಿತು.

ಸಭೇಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ, ಸಮತಾ ಸೊಸೈಟಿಯ ದೀಪಾ ಬುದ್ದೆ, ದೊರೆಸ್ವಾಮಿ, ಚೇತನ ನೆಟ್‌ವರ್ಕ್ ಸಂಸ್ಥೆಯ ಭಾಗ್ಯಮ್ಮ, ಸ್ನೇಹ ಟ್ರಸ್ಟ್‌ನ ಭಾಗ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net