

ಚಾಮರಾಜನಗರ: ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಜೀವವನ್ನೇ ಬಲಿ ಕೊಟ್ಟ ಹುತಾತ್ಮರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಅಭಿಪ್ರಾಯಪಟ್ಟರು.
ನಗರದ ಅರಣ್ಯ ಕೇಂದ್ರ ಸಸ್ಯ ಕ್ಷೇತ್ರದ ಅರಣ್ಯ ಹುತಾತ್ಮರ ಸ್ಮಾರಕದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳನ್ನು ಮಾಂಸ, ಚರ್ಮಕ್ಕಾಗಿ ಬೇಟೆಯಾಡುತ್ತಿರುವುದು ದುರದೃಷ್ಟಕರ. ಇಂತಹ ಸಾಕಷ್ಟು ಪ್ರಕರಣಗಳು ನಡೆಯುತ್ತಿದ್ದು ದೂರುಗಳು ದಾಖಲಾಗುತ್ತಿವೆ.
ಅರಣ್ಯ ಸಂರಕ್ಷಣೆ ಬಹಳ ಮುಖ್ಯ, ಕಾಡು ಇದ್ದರೆ ಉತ್ತಮ ಮಳೆ ಬರಲು ಸಾಧ್ಯ. ವನ್ಯಜೀವಿಗಳ ಸಂರಕ್ಷಣೆಯೂ ಅತ್ಯಗತ್ಯವಾಗಿದೆ. ಕಾಡನ್ನು ಉಳಿಸಲು ತಮ್ಮ ಪ್ರಾಣವನ್ನು ಬಲಿ ಕೊಟ್ಟ ಅರಣ್ಯ ಸಂರಕ್ಷಕರಿಗೆ ಪ್ರತಿ ವರ್ಷ ಹುತಾತ್ಮರ ದಿನಾಚರಣೆ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪಾ ಜೆ.ಕಂಟ್ರಾಕ್ಟರ್ ಮಾತನಾಡಿ, 1730 ರ ಸೆ.11 ರಂದು ಜೋದ್‌ಪುರ ರಾಜ ಅಭಯ್‌ಸಿಂಗ್ ಅರಮನೆ ಕಟ್ಟಲು ಕಾಡಿನಲ್ಲಿ ಮರಗಳನ್ನು ಕಡಿಯಲು ಮುಂದಾಗುತ್ತಾರೆ. ಈ ವೇಳೆ ಅಲ್ಲಿನ 363 ಜನರು ಮರಗಳನ್ನು ಅಪ್ಪಿಕೊಂಡು ಮರ ಕಡಿಯಲು ವಿರೋಧಿಸಿದರು. ಈ ಸಂದರ್ಭದಲ್ಲಿ 363 ಜನರನ್ನು ಕೊಲ್ಲಲಾಯಿತು. ಅವರನ್ನು ಗೌರವಿಸುವ ನಿಟ್ಟಿನಲ್ಲಿ ಹಾಗೂ ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮ ಪ್ರಾಣತೆತ್ತ ಹುತಾತ್ಮರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ 2013ರ ಸೆ.ಹುತಾತ್ಮರ ದಿನಾಚರಣೆಯನ್ನು ಘೋಷಣೆ ಮಾಡಿತು ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪದ್ಮನಿ ಸಾಹು, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮಲ್ಲೇಶಪ್ಪ, ಎಸಿಎಫ್ ಸುರೇಶ್ ಕರಿಯಪ್ಪ, ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯ, ವಲಯ ಅರಣ್ಯಾಧಿಕಾರಿ ವಿನೋದ್ ಗೌಡ, ನಾಗೇಂದ್ರನಾಯಕ್ ಹಾಗೂ ಇತರರು ಹಾಜರಿದ್ದರು.