ಮಕ್ಕಳ ಜವಾಬ್ದಾರಿಯಿಂದ ಪರಿಸರ ಸಂರಕ್ಷಣೆ ಸಾಧ್ಯ

11raju1
Published on

ಚಾಮರಾಜನಗರ: ಜಿಲ್ಲೆಯಲ್ಲಿರುವ ಶೇ.50 ಕ್ಕಿಂತಲೂ ಹೆಚ್ಚು ಕಾಡಿನ ಪ್ರದೇಶವನ್ನು ಉಳಿಸಿಕೊಂಡು, ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹೇಳಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಸ್ಯಶಾಮಲಾ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮನುಷ್ಯನಿಗೆ ಬದುಕಲು ಅಗತ್ಯವಾಗಿರುವ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ತಮಗೆ ಮಕ್ಕಳು ಇಲ್ಲದಿದ್ದರೂ ಆಲದಗಿಡಗಳನ್ನು ನೆಟ್ಟು ಪೋಷಣೆ ಮಾಡಿ, ತಮ್ಮ ಮಕ್ಕಳಂತೆ ಆರೈಕೆ ಮಾಡಿದ ಸಾಲುಮರದ ತಿಮ್ಮಕ್ಕ ನಮ್ಮೆಲ್ಲರಿಗೂ ಆದರ್ಶವಾಗಬೇಕು. ದೇಸದಲ್ಲಿ ಸೈನಿಕರು ಗಡಿ ಕಾಯುತ್ತಾರೆ, ಆಗೆಯೇ ಅರಣ್ಯ ಅಧಿಕಾರಿಗಳು ಕಾಡನ್ನು ಕಾಯುತ್ತಾರೆ. ಜಿಲ್ಲೆಯಲ್ಲಿರುವ ಶೇ.50 ಕ್ಕಿಂತಲೂ ಹೆಚ್ಚು ಅರಣ್ಯ ಪ್ರದೇಶ ನಮಗೆ ವರದಾನವಾಗಿ ಬಂದಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.

ಮನುಷ್ಯನಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಅರಣ್ಯ ಪ್ರದೇಶವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಸಸ್ಯ ಶಾಮಲಾ ಕಾರ್ಯಕ್ರಮ ೋಷಣೆ ಮಾಡಿದೆ. ಇದರಲ್ಲಿ ಸಸಿಗಳನ್ನು ಪೋಷಣೆ ಮಾಡುವ ಜವಬ್ದಾರಿಯನ್ನು ಮಕ್ಕಳೇ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ 22 ಸಾವಿರ ಗಿಡಗಳನ್ನು ಶಾಲಾ ಕಾಲೇಜುಗಳಲ್ಲಿ ನೆಟ್ಟು, ಪೋಷಣೆ ಮಾಡಬೇಕಿದೆ. ವಿದ್ಯಾರ್ಥಿಗಳು ಜವಾಬ್ದಾರಿ ವಹಿಸಿಕೊಂಡರೆ ಇದು ಯಶಸ್ಸು ಕಾಣುವುದರಲ್ಲಿ ಅನುಮಾನವಿಲ್ಲ ಎಂದರು.

ನಗರಸಭಾ ಸದಸ್ಯ ಮಹೇಶ್ ಮಾತನಾಡಿ, ನಮ್ಮ ಸ್ವಾರ್ಥಕ್ಕಾಗಿ ಕಾಡನ್ನು ನಾಶ ಮಾಡುವ ಕೆಲಸ ಮಾಡುತ್ತಿದ್ದೇವೆ. ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ ಮಾಡುವುದು ಅತ್ಯಂತ ವಿರಳ. ಸಾಲು ಮರದ ತಿಮ್ಮಕ್ಕ ಪರಿಸರ ಪ್ರೇಮವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಶಾಲಾ ಮೈದಾನದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಿ.ಆರ್.ಟಿ ಹುಲಿ ಸಂಕ್ಷಿತ ಪ್ರದೇಶದ ನಿರ್ದೇಶಕಿ ದೀಪಾ ಕಂಟ್ರ್ಯಾಕ್ಟರ್, ಡಯಟ್ ಪ್ರಾಂಶುಪಾಲ ಎಂ.ಕಾಶೀನಾಥ್, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸೋಮಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೆಗೌಡ ಹಾಗೂ ಇತರರು ಭಾಗವಹಿಸಿದ್ದರು.

2013-24 ನೇ ಸಾಲಿನ ಬಜೆಟ್‌ನಲ್ಲಿ ಸಸ್ಯಶಾಮಲ ಕಾರ್ಯಕ್ರಮ ಘೋಷಣೆ ಮಾಡಲಾಗಿದೆ. ಇಡೀ ರಾಜ್ಯದಲ್ಲಿ 50 ಲಕ್ಷ ಸಸಿಗಳನ್ನು ಸರ್ಕಾರಿ ಶಾಲೆಗಳಲ್ಲಿ ನೆಡುವ ಉದ್ದೇಶವಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ಉಚಿತವಾಗಿ ಸಸಿ ನೀಡಲಾಗುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಗಿಡಗಳ ಜವಾಬ್ದಾರಿ ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಸರ್ಕಾರ ಮುಂದಾಗಿದೆ.-ರಾಮಚಂದ್ರ ರಾಜೇ ಅರಸ್, ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net