ಅನುಮಾನಕ್ಕೆ ಕಾರಣವಾದ ಕಾಂಗ್ರೆಸ್ ಮೌನ

c.m.krishna mooruthy
Published on

ಚಾಮರಾಜನಗರ: ದಡದಹಳ್ಳಿ ರಮೇಶ್ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಆತನ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಮೌನ ಅನುಮಾನಕ್ಕೆ ಕಾರಣವಾಗಿದೆ ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ಆರೋಪ ಮಾಡಿದರು.

ತಾಲೂಕಿನ ದಡದಹಳ್ಳಿ ಗ್ರಾಮದ ಮಾಜಿ ಗ್ರಾ.ಪಂ ಸದಸ್ಯ ರಮೇಶ್ ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ಕಟ್ಟಾ ಬೆಂಬಲಿಗನಾಗಿದ್ದನು. ರಮೇಶ್ ಸಾವಿನ ಸಂಬಂಧ ಇಲ್ಲಿಯ ತನಕ ಶಾಸಕರು ಚಕಾರ ಎತ್ತಿಲ್ಲ. ಜಿಲ್ಲೆಯ ಮೂವರು ಶಾಸಕರಾಗಲೀ, ಪಕ್ಷದ ಮುಖಂಡರಾಗಲೀ ಕುಟುಂಬಕ್ಕೆ ಸಾಂತ್ವನ ಹೇಳುವ ಕಾರ್ಯ ಮಾಡಿಲ್ಲ. ಅಲ್ಲದೇ ಈ ಸಾವಿನ ಬಗ್ಗೆ ವಿಶೇಷ ತನಿಖೆ ಮಾಡಿಸುವ ಮಾನವೀಯತೆಯನ್ನು ತೋರಿಸಿಲ್ಲ. ಶಾಸಕ ಸಿ.ಪುಟ್ಟರಂಗಶೆಟ್ಟಿ ಮೌನ ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಡುತ್ತಿದೆ ಎಂದು ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು.

ಒಂದು ವೇಳೆ ಬಿಜೆಪಿ ಕಾರ್ಯಕರ್ತನಿಗೆ ಈ ರೀತಿಯಾಗಿದ್ದರೆ ಅಲ್ಲೋಲ ಕಲ್ಲೋಲ ಆಗುತ್ತಿತ್ತು. ಬಿಜೆಪಿ ಸರ್ಕಾರವಿದ್ದಾಗ ಮೃತಪಟ್ಟ ಕಾರ್ಯಕರ್ತರಿಗೆ ಪರಿಹಾರ, ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸಿದ್ದಾರೆ. ಆದರೆ, ಕಾಂಗ್ರೆಸ್ ಕಾರ್ಯಕರ್ತನಿಗೆ ನ್ಯಾಯ ಸಿಗದಿರುವುದು ವಿಪರ್ಯಾಸ. ಶಾಸಕರಿಗೆ ನೈತಿಕತೆ ಇದ್ದರೆ ಈ ಪ್ರಕರಣ ಸಂಬಂಧ ಸಿಐಡಿ ತನಿಖೆ ಮಾಡಿಸುತ್ತಿದ್ದರು. ಆದರೆ, ಯಾವುದನ್ನು ಮಾಡದೇ ಮೌನ ವಹಿಸಿರುವುದು ಅತ್ಯಂತ ಖಂಡನೀಯ. ಉನ್ನತ ಮಟ್ಟದ ತನಿಖೆ ಮಾಡಿಸಿ ಸತ್ಯಾಂಶ ತಿಳಿಸುವ ಮನಸ್ಥಿತಿ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಕಿಡಿಕಾರಿದರು.

ನ್ಯಾಯಾಂಗ ತನಿಖೆಗೆ ಆಗ್ರಹ:
ಅನುಮಾನಸ್ಪದವಾಗಿ ಮೃತಪಟ್ಟಿರುವ ದಡದಹಳ್ಳಿ ರಮೇಶ್ ಸಾವಿನ ಪ್ರಕರಣ ಸಂಬಂಧ ಕಾರ್ಯಾಂಗದ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ವಾರದೊಳಗೆ ಸತ್ಯಾಂಶ ಹೊರಗೆ ಬರಬೇಕು. ಮೃತರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕೊಡಬೇಕು. ಅಲ್ಲದೇ 50 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ, ಮುಖಂಡ ದಡದಹಳ್ಳಿ ಶಂಕರ್, ಕುಮಾರ್, ನಾರಾಯಣಸ್ವಾಮಿ, ಎಸ್.ಪಿ.ಮಹೇಶ್, ಚಕ್ರವರ್ತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net