

ಚಾಮರಾಜನಗರ: ಜಿಲ್ಲೆಯ ಸಮೃದ್ಧತೆಯ ಸಂಕೇತವಾಗಿರುವ ಅರಣ್ಯ ಪ್ರದೇಶವನ್ನು, ಭೂಮಾಲೀಕರು ಒತ್ತುವರಿ ಮಾಡಿಕೊಳ್ಳುವ ಮೂಲಕ ಅರಣ್ಯನಾಶ, ಮಾನವ ವನ್ಯಜೀವಿಗಳ ಸಂಘರ್ಷಕ್ಕೆ ಅವಕಾಶ ಮಾಡಿಕೊಡುತ್ತಿದೆ.
ಜಿಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮಲೆ ಮಹದೇಶ್ವರ ವನ್ಯಜೀವಿಧಾಮ, ಬಿ.ಆರ್.ಟಿ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶ ಹಾಗೂ ಕಾವೇರಿ ವನ್ಯಜೀವಿಧಾಮಗಳಿಂದ ಶೇ.50 ಕ್ಕಿಂತಲೂ ಹೆಚ್ಚು ಅರಣ್ಯ ಪ್ರದೇಶವನ್ನು ಒಳಗೊಂಡು ಸಮೃದ್ಧತೆಯಿಂದ ಕೂಡಿದೆ. ಈ ಅರಣ್ಯ ಪ್ರದೇಶಗಳ ಹಂಚಿನಲ್ಲಿ ಸಾಕಷ್ಟು ರೈತರು ಕೃಷಿ ಜಮೀನನ್ನು ಹೊಂದಿದ್ದು, ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಅರಣ್ಯ ಪ್ರದೇಶದ ಹಂಚಿನಲ್ಲಿ, ಸೂಕ್ಷ್ಮ ಪರಿಸರ ವಲಯದ ವ್ಯಾಪ್ತಿಯಲ್ಲಿ ಕೃಷಿ ಮಾಡುವ ಉದ್ದೇಶದಿಂದ ಜಮೀನು ಖರೀದಿಸಿ ಇನ್ನಿತರೆ ಕಾರ್ಯಗಳಿಗೆ ಭೂಮಿಯನ್ನು ಬಳಕೆ ಮಾಡುವ ಪ್ರಕ್ರಿಯೆ ಹೆಚ್ಚಾಗಿ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಬಿ.ಆರ್.ಟಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈಗಾಗಲೇ ಸಾಕಷ್ಟು ಬೃಹತ್ ಕಟ್ಟಡಗಳು ಹಾಗೂ ಅನಧಿಕೃತ ರೆಸಾರ್ಟ್‌ಗಳು ತಲೆ ಎತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಾಕಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇತ್ತೀಚೆಗೆ ಹೆಚ್ಚಾಗುತ್ತಿರುವ ಅರಣ್ಯ ಒತ್ತುವರಿಯ ಲವಾಗಿ ವನ್ಯಜೀವಿಗಳು ನಾಡಿಗೆ ಲಗ್ಗೆ ಹಿಡುತ್ತಿದ್ದು, ಮಾನವ-ವನ್ಯಜೀವಿಗಳ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಸಣ್ಣಪುಟ್ಟ ರೈತರು ಅರಣ್ಯದ ಹಂಚಿನಲ್ಲಿ ಕೃಷಿಯ ಕಾರಣಕ್ಕೆ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ವಶಪಡಿಸಿಕೊಳ್ಳುವ ಅರಣ್ಯ ಇಲಾಖೆ ಭೂಮಾಲೀಕರು ಮಾಡಿಕೊಂಡಿರುವ ಜಾಗವನ್ನು ಹಿಂಪಡೆಯಬೇಕು ಎಂಬ ಕೂಗು ಕೇಳಿಬಂದಿದೆ. ಈ ಕುರಿತು ಸಾರ್ವಜನಿಕರು ವಿಜಯವಾಣಿ ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಗಮನಕ್ಕೆ ತಂದರೆ ಸೂಕ್ತ ಕ್ರಮ
ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು 2 ತಿಂಗಳು ಕಳೆದಿದೆ. ಈಗಾಗಲೇ ಜಿಲ್ಲೆಯಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮಲೆ ಮಹದೇಶ್ವರ ವನ್ಯಜೀವಿಧಾಮ, ಬಿ.ಆರ್.ಟಿ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದ ಅರಣ್ಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ಅನಧಿಕೃತವಾಗಿ ಅರಣ್ಯ ಪ್ರದೇಶ ಒತ್ತುವರಿ ಮಾಡಲು ಅವಕಾಶವಿಲ್ಲ. ಒಂದು ವೇಳೆ ಅನಧಿಕೃತವಾಗಿ ಅರಣ್ಯ ಪ್ರದೇಶ ಒತ್ತುವರಿ ಮಾಡಲಾಗಿರುವ ಕುರಿತು ಮಾಹಿತಿ ಇದ್ದು, ನನ್ನ ಗಮನಕ್ಕೆ ತಂದರೆ ಸೂಕ್ತ ಕ್ರಮವಹಿಸುತ್ತೇನೆ. ಈಗಾಗಲೇ ಅರಣ್ಯ ಭೂಮಿ ಒತ್ತುವರಿ ಸಂಬಂಧ ಒಂದು ತಿಂಗಳಿಂದ ಜಂಟಿ ಸರ್ವೇ ಕಾರ್ಯ ನಡೆಯುತ್ತಿದೆ.
-ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ.
ಅರಣ್ಯ ಅಧಿಕಾರಿಗಳ ವೈಲ್ಯ
ಜಿಲ್ಲೆಯಲ್ಲಿ ಸುಮಾರು 60 ಸಾವಿರ ಎಕರೆ ಅರಣ್ಯ ಪ್ರದೇಶದ ಒತ್ತುವರಿಯಾಗಿದೆ ಎಂದು 2011 ರಿಂದಲೂ ನಾವು ಹೋರಾಟ ನಡೆಸುತ್ತಾ ಬಂದಿದ್ದೇವೆ. ಈ ಕುರಿತು ಭೂಕಬಳಿಕೆ ನ್ಯಾಯಾಲಯದಿಂದ ಪರಿಶೀಲನೆ ನಡೆಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಈಗ ಅದು ಮತ್ತಷ್ಟು ಹೆಚ್ಚಾಗಿದೆ. ಅರಣ್ಯ ಅಧಿಕಾರಿಗಳ ವೈಫಲ್ಯ ಇಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಕಂದಾಯ ಅಧಿಕಾರಿಗಳು ಅಕ್ರಮವಾಗಿ ಭೂಮಿ ನೀಡಿದ್ದಾರೆ. ನಮ್ಮ ಭಾಗದಲ್ಲಿ ಪುಣಜನೂರು ಫಾರೆಸ್ಟ್ ಎಚ್.ಡಿ.ಫಾರೆಸ್ಟ್ ಎಂದು ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಸಾಕಷ್ಟು ಜನರು ಬೃಹತ್ ಕಟ್ಟಡ ಹಾಗೂ ರೆಸಾರ್ಟ್‌ಗಳನ್ನು ನಿರ್ಮಾಣಮಾಡಿ ಅನುಭವಿಸುತ್ತಿದ್ದಾರೆ.
-ಪುಣಜನೂರು ದೊರೆಸ್ವಾಮಿ, ಹಿರಿಯ ಹೋರಾಟಗಾರರು, ಚಾಮರಾಜನಗರ.
ಅನಧಿಕೃತ ಹೋಂಸ್ಟೇ ನಿರ್ಮಾಣ
ಬಂಡೀಪುರ ಪ್ರಖ್ಯಾತವಾದಷ್ಟು ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ಹೆಚ್ಚಾಗುತ್ತಿದೆ. ಈ ಹಿಂದೆ ಕಾಡಂಚಿನ ಗ್ರಾಮಗಳಲ್ಲಿ ಇದ್ದ ಒತ್ತುವರಿಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿ ಕಂದಕ ನಿರ್ಮಿಸಿದ್ದರೂ ಬಡ ರೈತರ ಜಮೀನು ಖರೀದಿಸಿ ಕೃಷಿ ಚಟುವಟಿಕೆ ಹೆಸರಿನಲ್ಲಿ ಮನೆ ಕಟ್ಟಲು ಅನುಮತಿ ಪಡೆದು ಅನಧಿಕೃತ ಹೋಂ ಸ್ಟೇ ನಿರ್ಮಿಸಲಾಗುತ್ತಿದೆ. ಹತ್ತಾರು ಎಕರೆ ಪ್ರದೇಶಗಳಲ್ಲಿ ವ್ಯಾಪಿಸಿರುವ ರೆಸಾರ್ಟ್‌ಗಳು, ನೂರಾರು ಎಕರೆ ಒತ್ತುವರಿಗಿಂತ ಹೆಚ್ಚಿನ ಅಪಾಯಕಾರಿಯಾಗಿವೆ. ಸಣ್ಣಪುಟ್ಟ ರೈತರ ಒತ್ತುವರಿ ತೆರವುಗೊಳಿಸುವ ಸರ್ಕಾರ ಎಲ್ಲಾ ರೆಸಾರ್ಟ್‌ಗಳನ್ನು ಬಂದ್ ಮಾಡಿಸುವಂತಾಗಬೇಕು.
-ಮಾಧು, ರೈತ ಮುಖಂಡ, ಹಂಗಳ, ಗುಂಡ್ಲುಪೇಟೆ.
ಮಾನವ ವನ್ಯಜೀವಿ ಸಂಘರ್ಷಕ್ಕೆ ದಾರಿ
ಬಂಡೀಫುರದಲ್ಲಿ ಪ್ರತಿ ವರ್ಷ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅರಣ್ಯ ಭೂಮಿ ಒತ್ತುವರಿಯಾಗುತ್ತಿರುವುದರಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಬಂಡೀಫುರ ಹುಲಿ ಯೋಜನೆಯ ಓಂಕಾರ್ ವಲಯವೊಂದರಲ್ಲಿಯೇ ಸುಮಾರು ಎರಡು ಸಾವಿರ ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಅನಧಿಕೃತವಾಗಿ ಒತ್ತುವರಿಯಾಗಿದೆ. ಹೆಡಿಯಾಲ ಮಾರ್ಗದಲ್ಲಿ ಹಲವಾರು ಕಾಲೋನಿಗಳನ್ನು ನಿರ್ಮಿಸಿ ಜನವಸತಿಗೆ ನೀಡಲಾಗಿದೆ. ಇತ್ತೀಚೆಗೆ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳು ಸಹಾ ಇತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದರಿಂದ ಸಮಸ್ಯೆ ಉಲ್ಬಣಿಸುತ್ತಿದೆ. ಆದ್ದರಿಂದ ಇನ್ನಾದರೂ ಅನಧಿಕೃತ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕು.
-ವಿದ್ಯಾಶಂಕರ್, ಪರಿಸರಪ್ರೇಮಿ, ಗುಂಡ್ಲುಪೇಟೆ.
ಪ್ರಾಣಿ ಸಂಕುಲಕ್ಕೆ ತೊಡಕು
ಕಾಡಂಚಿನ ಪ್ರದೇಶದಲ್ಲಿ ಹೆಚ್ಚಾಗಿ ಒತ್ತುವರಿ ಆಗುತ್ತಿರುವ ಪರಿಣಾಮ ಪ್ರಾಣಿ ಸಂಕುಲಕ್ಕೆ ತೊಡಕು ಉಂಟಾಗುತ್ತಿದೆ. ಇದರಿಂದ ಮಾನವ ಮತ್ತು ಪ್ರಾಣಿ ಸಂಘರ್ಷಗಳು ಹೆಚ್ಚಾಗಿ, ಸಾವು ನೋವುಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ. ಇದರಿಂದ ಅರಣ್ಯ ನಾಶವಾಗುತ್ತಿದ್ದು, ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಾಡಂಚಿನ ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.
-ಮೀರೆ ಸಿದ್ದರಾಜು, ನಿವಾಸಿ, ಯಳಂದೂರು.
ಅರಣ್ಯ ಒತ್ತುವರಿ ಸರಿಯಲ್ಲ
ಜಿಲ್ಲೆಯಲ್ಲಿ ಎರಡು ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶ ಇರುವುದು ಹೆಮ್ಮೆಯ ವಿಚಾರ. ಆದರೆ ಈ ಪ್ರದೇಶವನ್ನು ಮತ್ತಷ್ಟು ವಿಸ್ತರಿಸಲು ತೊಡಕು ಉಂಟಾಗಿದ್ದು, ಒತ್ತುವರಿ ಕೂಡ ಆಗುತ್ತಿದೆ. ವ್ಯವಸಾಯ ಮತ್ತು ಕೃಷಿ ಮಾಡುವ ನೆಪದಲ್ಲಿ ಅರಣ್ಯ ಒತ್ತುವರಿ ಮಾಡಲಾಗುತ್ತಿರುವುದು ಸರಿಯಲ್ಲ. ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಗಮನರಿಸಬೇಕು. ಇಲ್ಲದಿದ್ದರೆ ಅತಿಹೆಚ್ಚು ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಜಿಲ್ಲ್ಲೆ ಸಾಕಷ್ಟು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಬಹುದು.
-ಅಂಜಲಿ , ಪರಿಸರಪ್ರೇಮಿ, ಯಳಂದೂರು.
ಅರಣ್ಯ ವಿಸ್ತೀರ್ಣ ಕ್ಷೀಣ
ಹನೂರು ಭಾಗದಲ್ಲಿ ಕಾವೇರಿ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮವಿದ್ದು, ಸಮೃದ್ಧಿಯಿಂದ ಕೂಡಿರುವುದು ಸಂತಸದ ವಿಷಯ. ಆದರೆ ಕೆಲವೆಡೆ ಅರಣ್ಯದಂಚಿನಲ್ಲಿ ಜಮೀನನ್ನು ಹೊಂದಿರುವ ಕೆಲ ರೈತರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಅರಣ್ಯ ವಿಸ್ತೀರ್ಣ ಪ್ರದೇಶ ಕ್ಷೀಣಿಸಲಿದೆ. ಜತೆಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮವಹಿಸಿ ಅರಣ್ಯ ಪ್ರದೇಶ ಒತ್ತುವರಿಯಾಗದಂತೆ ಕ್ರಮವಹಿಸಬೇಕು. ಈ ದಿಸೆಯಲ್ಲಿ ಅರಣ್ಯ ಪ್ರದೇಶದ ಎಲ್ಲೇ ಗುರುತಿಸಿ ತಂತಿಬೇಲಿ ಅಥವಾ ಟ್ರಂಚ್ ನಿರ್ಮಿಸಬೇಕು.
-ಕೃಷ್ಣಮೂರ್ತಿ, ಅಧ್ಯಕ್ಷ, ಪರಿವರ್ತನಾ ಗ್ರಾಮ ಅರಣ್ಯ ಸಮಿತಿ, ಹೊಸ ದೊಡ್ಡಿ, ಹನೂರು.
ಅರಣ್ಯ ಇಲಾಖೆ ನಿಗಾವಹಿಸಬೇಕು.
ಕಾವೇರಿ ವನ್ಯಜೀವಿಧಾಮ ಮತ್ತು ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ಧಾಮ ಈ ಭಾಗದ ಜನರ ಜೀವನಾಡಿಯಾಗಿದೆ. ಸಾಕಷ್ಟು ರೈತರು ಹಾಗೂ ಭೂಮಾಲೀಕರು ಒತ್ತುವರಿ ಮಾಡಿಕೊಳ್ಳುವುದರಿಂದ ಅರಣ್ಯ ಪ್ರದೇಶ ಕ್ಷೀಣಿಸುವುದು ಒಂದೆಡೆಯಾದರೆ, ಮುಂದಿನ ದಿನಗಳಲ್ಲಿ ಮಾನವ -ಪ್ರಾಣಿ ಸಂಘರ್ಷಕ್ಕೆ ಕಾರಣವಾಗಬಹುದು. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಒತ್ತುವರಿಯಾಗಿರುವ ಜಾಗವನ್ನು ತೆರೆವುಗೊಳಿಸಬೇಕು. ಜತೆಗೆ ಒತ್ತುವರಿಯಾಗದಂತೆ ಹೆಚ್ಚಿನ ನಿಗಾವಹಿಸಬೇಕಿದೆ.
-ಎನ್.ಸೌಮ್ಯ, ಮಲೆ ಮಹದೇಶ್ವರ ಬೆಟ್ಟ, ಹನೂರು.