ಸಂವಿಧಾನ ಪೀಠಿಕೆ ಓದು ಮಹತ್ತರ ಕಾರ್ಯಕ್ರಮ

chn4
Published on

ಚಾಮರಾಜನಗರ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಆಚರಣೆಯ ಭಾಗವಾಗಿ ಸೆ. 15ರಂದು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಭಾರತ ಸಂವಿಧಾನದ ಪೀಠಿಕೆಯನ್ನು ಓದುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಎಲ್ಲರು ಸಹಕರಿಸುವಂತೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿವಿಧ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳೊಂದಿಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಸಂಬಂಧ ಸಭೆ ನಡೆಸಿ ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಭಾರತ ಸಂವಿಧಾನದ ಮಹತ್ವವನ್ನು ಸಾರುವ ಉದ್ದೇಶದಿಂದ ಸೆ.15ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ವಿವಿಧ ಕಡೆ ಏಕಕಾಲದಲ್ಲಿ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮವನ್ನು ಏರ್ಪಾಡು ಮಾಡಲಾಗಿದೆ. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳಲು ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಥಾ ಹೊರಡಲಿದೆ. ಜಾಥಾ ಹೊರಟು ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಮಾವೇಶಗೊಳ್ಳಲಿದೆ. ಅಲ್ಲಿ ಸಂವಿಧಾನ ಪೀಠಿಕೆ ಓದುವ ಮಹತ್ತರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಜಾಥಾದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಯನ್ನು ಒಳಗೊಂಡ ಮಾದರಿ ಸ್ತಬ್ದಚಿತ್ರವನ್ನು ಪ್ರದರ್ಶಿಸಿ ಸಂವಿಧಾನದ ಮಹತ್ವವನ್ನ ತಿಳಿಸುವ ಕಾರ್ಯವಾಗಬೇಕು. ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಬೇಕು. ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಯಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಮಾತನಾಡಿ ಕಾರ್ಯಕ್ರಮ, ಸಂಬಂಧ ಸಭೆಯಲ್ಲಿ ನೀಡಿರುವ ಸಲಹೆ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು. ಎಲ್ಲರ ಆಶಯದಂತೆ ಕಾರ್ಯಕ್ರಮ ರೂಪಿಸಲಾಗುವುದು. ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ನೋಂದಣಿ ಮಾಡಲು ಹೆಚ್ಚಿನ ಗುರಿ ಹೊಂದಲಾಗಿದೆ. ಸಂವಿಧಾನದ ಪೀಠಿಕೆ ಓದಲು ಎಲ್ಲರೂ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಎಲ್ಲರು ಅಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸರಸ್ವತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ಮುಖಂಡ ಸಿ.ಕೆ. ಮಂಜುನಾಥ್, ಸಿ.ಎಂ. ಕೃಷ್ಣಮೂರ್ತಿ, ನಾಗಯ್ಯ, ಕೆ.ಎಂ. ನಾಗರಾಜು, ರಾಮಸಮುದ್ರ ನಾಗರಾಜು, ಬಸವನಪುರ ರಾಜಶೇಖರ್, ಕುಮಾರ್ ನಾಯಕ, ಬಸವರಾಜು, ಶಿವಣ್ಣ, ನಾಗೇಶ್, ನಾರಾಯಣ, ಹೊಂಗನೂರು ನಟರಾಜು, ಕಂದಹಳ್ಳಿ ನಾರಾಯಣ, ರಾಜು, ಗಣೇಶ, ಪರಶಿವ, ಇತರೆ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net