ಸಂವಿಧಾನ ಪೀಠಿಕೆ ಓದು ನೋಂದಣಿಗೆ ಜಿಲ್ಲಾಧಿಕಾರಿ ಮನವಿ

chn4
Published on

ಚಾಮರಾಜನಗರ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಆಚರಣೆಯ ಭಾಗವಾಗಿ ಸೆ. 15ರಂದು ಭಾರತ ಸಂವಿಧಾನದ ಪೀಠಿಕೆಯನ್ನು ಓದುವ ಬಹುದೊಡ್ಡ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಜನರು ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಕೋರಿದ್ದಾರೆ.

ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಸೇರಿದಂತೆ ವಿವಿಧಡೆ ಏಕಕಾಲದಲ್ಲಿ ಸೆ.15 ರಂದು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು, ಸ್ತ್ರೀ ಶಕ್ತಿ ಮಹಿಳಾ ಸಂಘದ ಸದಸ್ಯರು, ಎನ್‌ಜಿಒಗಳು, ಪಕ್ಷಗಳ ಸದಸ್ಯರು, ಸಹಕಾರ ಸಂಸ್ಥೆ, ಸರ್ಕಾರಿ, ಖಾಸಗಿ ಕಚೇರಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಸರ್ವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಿಧಾನ ಪೀಠಿಕೆ ಓದಲಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಬೆಳಿಗ್ಗೆ 9 ಗಂಟೆಗೆ ಬಹು ದೊಡ್ಡ ಸಂಖ್ಯೆಯಲ್ಲಿ ಜಾಥಾ ಹೊರಡಲಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿ, ಸಿಬ್ಬಂದಿ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜಾಥಾದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಯ ಮಾದರಿ ಕುರಿತ ಸ್ತಬ್ದ ಚಿತ್ರ ಸಹ ಇರಲಿದೆ. ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ಜಾಥಾ ಹಾಗು ಸ್ಥಬ್ದಚಿತ್ರ ತಲುಪಲಿದೆ. ಕ್ರೀಡಾಂಗಣದಲ್ಲಿ 3 ಸಾವಿರಕ್ಕಿಂತ ಹೆಚ್ಚು ಮಕ್ಕಳು, ಸಾರ್ವಜನಿಕರು ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಹುದೊಡ್ಡ ಕಾರ್ಯಕ್ರಮವನ್ನು ಡ್ರೋನ್ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಲಾಗುತ್ತದೆ. ಏಕಕಾಲದಲ್ಲಿ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಈಗಾಗಲೇ ಜಿಲ್ಲೆಯಲ್ಲಿ 3.24 ಲಕ್ಷ ಜನರು ನೋಂದಣಿ ಮಾಡಿಸಿದ್ದಾರೆ. ಇನ್ನೂ 2 ಲಕ್ಷ ಜನರನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯ ಜನರು ಆನ್‌ಲೈನ್ ವೆಬ್‌ಸೈಟ್ ಲಿಂಕ್
ಠಿಠಿ://ಠಿಛಿಟ್ಟಛಿಞಚ್ಝಿಛಿಡಿಚ್ಟ.ಜ್ಞಿ ರ ಮೂಲಕ ಮೊಬೈಲ್, ಗ್ರಾಮ ಒನ್ ಕೇಂದ್ರ, ಅಟಲ್‌ಜೀ ಜನಸ್ನೇಹಿ ಕೇಂದ್ರ, ಗ್ರಾಮ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳು, ಸಿಡಿಪಿಓ ಕಚೇರಿ, ರೈತ ಸಂಪರ್ಕ ಕೇಂದ್ರ, ಸ್ಥಳೀಯ ಸಹಕಾರ ಸಂಘಗಳ ಕಚೇರಿಗಳಲ್ಲಿ ನೋಂದಣಿ ಮಾಡಿಕೊಂಡು ಸಂವಿಧಾನ ಪೀಠಿಕೆ ಓದುವ ಮೂಲಕ ಸಂವಿಧಾನದ ಸಮಗ್ರತೆ ಎತ್ತಿಹಿಡಿಯುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಪ್ರಜಾಪ್ರಭುತ್ವ ದಿನವನ್ನು ಜಿಲ್ಲೆಯ ಜನತೆ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net