ರೋಗಿಗಳ ಸೇವೆಯಲ್ಲಿ ದಾದಿಯರ ಪಾತ್ರ ಸ್ಮರಣೀಯ

24raju2
Published on

ಚಾಮರಾಜನಗರ: ರೋಗಿಗಳ ಸೇವೆಯಲ್ಲಿ ದಾದಿಯರ ಪಾತ್ರ ಅಪಾರವಾಗಿದೆ ಎಂದು ಜೆಎಸ್‌ಎಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ವಿನಯ್‌ಕುಮಾರ್ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಸಭಾಂಗಣದಲ್ಲಿ ರೋಟರಿ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಫ್ಲಾರೆನ್ಸ್ ನೈಟಿಂಗೇಲ್ ಗಣನೀಯ ಸೇವೆಯನ್ನು ಪರಿಗಣಿಸಿ ಅವರ ಜನ್ಮದಿನವನ್ನು ಮೇ 12ರಂದು ವಿಶ್ವ ದಾದಿಯರ ದಿನವನ್ನಾಗಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಫ್ಲಾರೆನ್ಸ್ ನೈಟಿಂಗೇಲ್ ಮನುಕುಲದ ಸೇವೆಗೆ ಸರ್ವಸ್ವವನ್ನೂ ತ್ಯಾಗ ಮಾಡಿದ ಮಾನವತಾವಾದಿಯಾಗಿದ್ದು, ಶುಶ್ರೂಷಕ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನೇ ದಾದಿಯರು ಈಗಲೂ ಆದರ್ಶವಾಗಿಸಿಕೊಂಡು ಸೇವೆ ಮಾಡುತ್ತಿದ್ದಾರೆ. ರೋಟರಿ ಸಂಸ್ಥೆ ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ನಮ್ಮನ್ನು ಆಹ್ವಾನಿಸಿ ಸನ್ಮಾನಿಸಿರುವುದು ತುಂಬ ಖುಷಿಯಾಗಿದೆ ಎಂದರು.

1853ರಲ್ಲಿ ರಷ್ಯಾ ಹಾಗೂ ಬ್ರಿಟನ್ ದೇಶಗಳ ಮಧ್ಯೆ ನಡೆದಿದ್ದ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ಕೈಯಲ್ಲಿ ದೀಪ ಹಿಡಿದುಕೊಂಡು ಇಡೀ ರಾತ್ರಿ ಉಪಚರಿಸುತ್ತಿದ್ದರಿಂದ ಫ್ಲಾರನ್ಸ್ ನೈಟಿಂಗೇಲ್ ಅವರನ್ನು ದೀಪಧಾರಿಣಿ ದೇವತೆ ಎಂದು ಸೈನಿಕರು ಕರೆದಿದ್ದರು. ನೈಟಿಂಗೇಲ್ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಮನುಕುಲದ ಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ಅವರ ಮಾನವೀಯ ನಡೆಯನ್ನು ಇಂದಿನ ಯುವ ಜನಾಂಗ ಅರಿತುಕೊಂಡು ಸಾಗಬೇಕು ಎಂದು ಸಲಹೆ ನೀಡಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ ಮಾತನಾಡಿ, ಜೀವರಕ್ಷಣೆ ಮಾಡುವ ಮೂಲಕ ವೈದ್ಯರು, ದಾದಿಯರು ಜನರ ಪಾಲಿಗೆ ದೇವರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವೈದ್ಯರು ಹಾಗೂ ದಾದಿಯರು ಸಲ್ಲಿಸಿದ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದಾದಿಯರು ಜನರ ಪಾಲಿನ ಸಂಜೀವಿನಿಯಾಗಿದ್ದಾರೆ ಎಂದರು.

ಚಾ.ನಗರ ಜಿಲ್ಲಾಸ್ಪತ್ರೆಯ ಸ್ಟ್ಾ ನರ್ಸ್ ಸರಸ್ವತಿ, ಜೆಎಸ್‌ಎಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ವಿನಯ್‌ಕುಮಾರ್, ಸ್ಟಾಪ್ ನರ್ಸ್ ಮಹೇಂದ್ರ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಉಪಾಧ್ಯಕ್ಷ ಎಲ್.ನಾಗರಾಜು, ಮುಂದಿನ ಸಾಲಿನ ಅಧ್ಯಕ್ಷ ಚಂದ್ರಪ್ರಭಜೈನ್, ಕಾರ್ಯದರ್ಶಿ ದೀನಾ, ಸಿದ್ದಮಲ್ಲಪ್ಪ, ಕೆಂಪನಪುರ ಸಿದ್ದರಾಜು,ಅಂಕಶೆಟ್ಟಿ, ಪ್ರಭಕರ್, ಕಾಳನಹುಂಡಿ ಗುರುಸ್ವಾಮಿ,ಡಾಕ್ಟರ್ ಗೋವಿಂದಶೆಟ್ಟಿ, ಕಮಲ್ ರಾಜ್, ರಮೇಶ್, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net