

ಚಾಮರಾಜನಗರ: ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯಗಳ ತರಗತಿಗಳಿಗೆ ಸೇರಿಸಿದರೆ ಉತ್ತಮ ಕಲಾವಿದರಾಗಲು ಸಾಧ್ಯ ಎಂದು ಮಾಜಿ ಚೂಡ ಅಧ್ಯಕ್ಷ ಬಾಲಸುಬ್ರಮ್ಮಣ್ಯ ಸಲಹೆ ನೀಡಿದರು.
ನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರಲ್ಲಿ ಶ್ರೀ ಶಾರದಾ ಪ್ರದರ್ಶಕ ಕಲೆಗಳ ಪ್ರತಿಷ್ಠಾನ ವತಿಯಿಂದ ಶನಿವಾರ ಆಯೋಜಿಸಿದ್ದ ಹರಿದಾಸೋತ್ಸವ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ನೃತ್ಯಗಳಿಂದ ಮನೋರಂಜನೆ ಸಿಗಲಿದೆ. ಮಕ್ಕಳ ಪ್ರತಿಭೆಗಳನ್ನು ಹೊರ ಹಾಕಲು ಇಂತಹ ವೇದಿಕೆಗಳು ಸಹಕಾರಿಯಾಗಲಿದೆ. ಭರತನಾಟ್ಯಕ್ಕೆ ಮಹತ್ವವಾದ ಸ್ಥಾನವಿದೆ. ಭರತನಾಟ್ಯ ಧಾರ್ಮಿಕವಾಗಿಯೂ ಮಕ್ಕಳ ಮನಸ್ಸುಗಳನ್ನು ಶುದ್ದಮಾಡುತ್ತದೆ. ದಾಸರಕೀರ್ತನೆಗಳು ಸಂಗೀತಗಳಿಗೆ ಮತ್ತು ಭರತನಾಟ್ಯಗಳಿಗೆ ಮೆರಗು ನೀಡಿದೆ. ಶಾಸ್ತ್ರೀಯ ಸಂಗೀತಕ್ಕೆ, ದಾಸರ ಕೀರ್ತನೆಗಳಿಗೆ ಭರತನಾಟ್ಯದಲ್ಲಿ ಮೊದಲ ಸ್ಥಾನವಿದೆ. ಎಷ್ಟೋ ಭರತನಾಟ್ಯ ಪ್ರತಿಭೆಗಳು ದೇಶಾದ್ಯಂತ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಶೈಲಕುಮಾರ್ ಮಾತನಾಡಿ, ಕೃಷ್ಣ ಜನ್ಮಾಷ್ಠಮಿ ಸಂದರ್ಭದಲ್ಲಿ ಹರಿದಾಸೋತ್ಸವ ಮಾಡುತ್ತಿರುವುದು ಶ್ಲಾಘನೀಯ. ಮಕ್ಕಳಿಗೆ ಸನಾತನ ಧರ್ಮದ ಬಗ್ಗೆ ಹರಿವು ಮೂಡಿಸುವ ಧಾರ್ಮಿಕ ಕಾರ್ಯಕ್ರಮ ಇದಾಗಿದೆ. ಶಾರದಾ ಪ್ರದರ್ಶಕ ಕಲೆಗಳ ಪ್ರತಿಷ್ಠಾನ ಮೂಲಕ ಮಕ್ಕಳ ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ. ಪೋಷಕರು ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಪ್ರವೃತ್ತರಾಗಿ ಪ್ರತಿಷ್ಠಾನಕ್ಕೆ ಮತ್ತಷ್ಟು ಸಹಕಾರವನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮೈಸೂರಿನ ನಾದ ವಿದ್ಯಾಲಯದ ನಿರ್ದೇಶಕ ಸಂಗೀತ ಮತ್ತು ನೃತ್ಯ ವಿದ್ವಾನ್ ಎಂ.ಎಸ್.ನವೀನ್, ಮಿತ್ರಾನವೀನ್ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಕಲಾತ್ಮಿಕ ತಂಡದ ಡಾ.ಸುರೇಶ್ ಕೌಶಿಕ್ ಹಾಗೂ ನಾಟ್ಯ ಸಂಕುಲ ತಂಡದ ನಾಟ್ಯ ವಿದುಷಿ ನಾಗಶ್ರೀ, ಶ್ರೀನಿವಾಸ್ ಮತ್ತು ಚಾಮರಾಜನಗರದ ಶ್ರೀಶಾರದಾ ಪ್ರದರ್ಶಕ ಕಲೆಗಳ ಪ್ರತಿಷ್ಠಾನ ಮಕ್ಕಳಿಂದ ದಾಸರ ಪದಗಳಿಗೆ ನೃತ್ಯ ನಮನವನ್ನು ಸಲ್ಲಿಸಲಾಯಿತು.
ಸಮಾಜ ಸೇವಕರಾದ ವೆಂಕಟನಾಗಪ್ಪಶೆಟ್ಟಿ, ಶ್ರೀ ಶಾರದಾ ಪ್ರದರ್ಶಕ ಕಲೆಗಳ ಪ್ರತಿಷ್ಠಾನ ಸಂಸ್ಥಾಪಕ ಕಾರ್ಯದರ್ಶಿ ವಿ.ಮಹೇಶ್, ಅಧ್ಯಕ್ಷೆ ಕೆ.ಎನ್.ಭವ್ಯ, ಖಜಾಂಚಿ ವಿ.ಆಶಾ, ಉಪಾಧ್ಯಕ್ಷೆ ಶಾರದ ಹಾಗೂ ಇತರರು ಹಾಜರಿದ್ದರು.